ಅಮೆರಿಕದ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ ಉಕ್ರೇನ್ ಮೇಲೆ ರಷ್ಯಾ ಅಂತರ್ ಖಂಡಾಂತರ ಕ್ಷಿಪಣಿಯನ್ನು ಮೊದಲ ಬಾರಿ ಪ್ರಯೋಗಿಸುವ ಮೂಲಕ ಉಕ್ರೇನ್ ಬೆಂಬಲಿತ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಪರಮಾಣು ಬಾಂಬ್ ಸಿದ್ಧತೆ ಆರಂಭಿಸುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಂತರ್ ಖಂಡಾಂತರ ಕ್ಷಿಪಣಿ [ICBM ] ಕ್ಷಿಪಣಿಗಳ ದಾಳಿ ನಡೆಸಿದೆ. ಈ ಕ್ಷಿಪಣಿಗಳು ಪರಮಾಣು ಸಿಡಿತಲೆ ಹೊಂದಿಲ್ಲದ ಕಾರಣ ಹೆಚ್ಚು ಅಪಾಯ ಮಾಡದೇ ಇದ್ದರೂ ಎಚ್ಚರಿಕೆ ಸಂದೇಶವನ್ನು ರವಾನಿಸಿದಂತಾಗಿದೆ.
ಉಕ್ರೇನ್ ಹಾಗೂ ಅದರ ಬೆಂಬಲಿತ ರಾಷ್ಟ್ರಗಳು ತಮ್ಮ ಇತಿಮಿತಿ ಕುರಿತ ಕೆಂಪು ಪಟ್ಟಿಯನ್ನು ದಾಟದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ದಾಟಿದರೆ ಅದರ ಪರಿಣಾಮಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ರಷ್ಯಾ ಎಚ್ಚರಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ೧೦೦೦ ದಿನಗಳನ್ನು ಪೂರೈಸಿದ ಬೆನ್ನಲ್ಲೇ ಎರಡೂ ದೇಶಗಳು ಖಂಡಾಂತರ ಕ್ಷಿಪಣಿಗಳನ್ನು ಮೊದಲ ಬಾರಿ ಬಳಸಿದೆ. ಬುಧವಾರ ಉಕ್ರೇನ್ ಅಮೆರಿಕ ನೀಡಿದ್ದ ೬ ಕ್ಷಿಪಣಿಗಳನ್ನು ಬಳಸಿದರೆ ಇದೇ ಮೊದಲ ಬಾರಿ ರಷ್ಯಾ ಐಸಿಬಿಎಂ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.
ಗುರುವಾರ ಬೆಳಿಗ್ಗೆ ಉಕ್ರೇನ್ ನ ಡಿನಿಪ್ರೊ ನಗರದ ಮೇಲೆ ರಷ್ಯಾದ ಖಂಡಾಂತರ ಕ್ಷಿಪಣಿ ಬಂದು ಬಿದ್ದಿದೆ ಎಂದು ಉಕ್ರೇನ್ ಸೇನೆ ದೃಢಪಡಿಸಿದೆ.
ರಷ್ಯಾದ ಆರ್ ಎಸ್-೨೬ ರುಬೆಜ್ ಹೆಸರಿನ ಅಂತರ್ ಖಂಡಾಂತರ ಕ್ಷಿಪಣಿಯನ್ನು ಬಳಸಲಾಗಿದ್ದು ಇದು ಗರಿಷ್ಠ 5800 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯದ್ದಾಗಿದೆ. ರಷ್ಯಾ ಪರಮಾಣು ಸಿಡಿತಲೆ ಬಳಸದೇ ಈ ಕ್ಷಿಪಣಿ ಬಳಸಿದ್ದು, ಇದು 5000 ಕಿ.ಮೀ. ದೂರದ ಡಿನಿಪ್ರೊ ನಗರದ ಮೇಲೆ ಅಪ್ಪಳಿಳಿಸಿದೆ.
ಆರ್ ಎಸ್-26 ಕ್ಷಿಪಣಿಯನ್ನು ಮೊದಲ ಬಾರಿ 2012ಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. 12 ಮೀಟರ್ ಉದ್ದ ಹಾಗೂ ೩೬ ಟನ್ ತೂಕ ಹೊಂದಿದೆ. ಈ ಕ್ಷಿಪಣಿ ಜೊತೆ ರಷ್ಯಾ ಕಿನ್ಜಾಲ್ ಹೈಪರ್ ಸಾನಿಕ್ ಕೆಎಚ್-101 ಕ್ರೂಸರ್ ಕ್ಷಿಪಣಿಗಳನ್ನು ಉಡಾಯಿಸಲು ಸಿದ್ಧತೆ ನಡೆಸಿದೆ.