ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಬೇಟೆಗೆ ಬಳಸುವ ಗನ್ ಆಕಸ್ಮಿಕವಾಗಿ ಗುಂಡು ಹಾರಿದ್ದರಿಂದ ಭಾರತೀಯ ವಿದ್ಯಾರ್ಥಿ ಮೃತಪಟ್ಟ ಘಟನೆ ಅಮೆರಿಕದಲ್ಲಿ ಸಂಭವಿಸಿದೆ.
ಜಾರ್ಜಿಯಾದ ಅಟ್ಲಾಂಟಾದಲ್ಲಿ ಭಾರತೀಯ ಮೂಲದ 23 ವರ್ಷದ ಆರ್ಯನ್ ರೆಡ್ಡಿ ಮೃತಪಟ್ಟ ವಿದ್ಯಾರ್ಥಿ.
ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಆರ್ಯನ್ ರೆಡ್ಡಿ ಇತ್ತೀಚೆಗಷ್ಟೇ ಖರೀದಿಸಿದ್ದ ಬೇಟೆಗೆ ಬಳಸುವ ಗನ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಎದೆಗೆ ಬಡಿದಿದೆ.
ಮತ್ತೊಂದು ಕೋಣೆಯಲ್ಲಿದ್ದ ಸ್ನೇಹಿತರು ಗುಂಡಿನ ಶಬ್ಧ ಕೇಳಿ ಓಡಿ ಬಂದಾಗ ಆರ್ಯನ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಟ್ಲಾಂಟಾದಲ್ಲಿ ಕನ್ಸಾಸ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದ ಆರ್ಯನ್, ತೆಲಂಗಾಣದ ಭುವನಗಿರಿ ಜಿಲ್ಲೆಯ ಪೆದ್ದರಾವ್ ಪೆಳ್ಳಿ ಗ್ರಾಮದ ನಿವಾಸಿ ಆಗಿದ್ದಾರೆ. ಆದರೆ ಅವರ ಕುಟುಂಬ ಉಪ್ಪಾಳದಲ್ಲಿ ವಾಸವಾಗಿದ್ದು, ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ನಡೆದಿದೆ.