ವಿವಾದಿತ ಉದ್ಯಮಿ ಗೌತಮ್ ಅದಾನಿ ಮತ್ತು 6 ಸಹವರ್ತಿಗಳು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ದಶಲಕ್ಷ ಡಾಲರ್ (2,029 ಕೋಟಿ ರೂ.) ಲಂಚ ನೀಡಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ ನಂತರ ಅದಾನಿ ಗ್ರೂಪ್ ಸಂಕಷ್ಟದಲ್ಲಿದೆ.
ಕಳೆದ ವಾರ ಬಯಲಿಗೆ ಬಂದ ಆರೋಪಗಳ ಬಳಿಕ ಹಲವಾರು ದೇಶಗಳು ಗುಂಪಿನೊಂದಿಗಿನ ಒಪ್ಪಂದಗಳನ್ನು ಮರುಪರಿಶೀಲಿಸಲು ಅಥವಾ ರದ್ದುಗೊಳಿಸಲು ಮುಂದಾಗಿವೆ.
ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು ‘ಆಧಾರರಹಿತ’ ಎಂದು ಕರೆದಿದೆ ಮತ್ತು ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ. ಆದರೂ ಜಾಗತಿಕ ಒಪ್ಪಂದಗಳ ಮೇಲೆ ಇದು ಗಾಢ ಪರಿಣಾಮ ಬೀರಿದೆ.
ಅದಾನಿ ಗ್ರೂಪ್‌ನ ಜೊತೆ ಎರಡು ಯೋಜನೆಗಳನ್ನು ರದ್ದುಗೊಳಿಸಲು ಕೀನ್ಯಾ ತ್ವರಿತವಾಗಿ ಕ್ರಮ ಕೈಗೊಂಡಿದೆ. ದೇಶದ ಮುಖ್ಯ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಬೇಕಿದ್ದ ಖರೀದಿ ಪ್ರಕ್ರಿಯೆಯನ್ನು ಕೊನೆಗೊಳಿಸಲಾಗಿದೆ ಎಂದು ಅಧ್ಯಕ್ಷ ವಿಲಿಯಂ ರುಟೊ ಗುರುವಾರ ಹೇಳಿದ್ದಾರೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನಲ್ಲಿ ಶೇ.20 ಪಾಲನ್ನು ಹೊಂದಿರುವ ಫ್ರೆಂಚ್ ಇಂಧನ ದೈತ್ಯ ಟೋಟಲ್ ಎನರ್ಜಿಸ್, ಅದಾನಿ ಸಂಬಂಧಿತ ಉದ್ಯಮಗಳಿಗೆ ಯಾವುದೇ ಹೊಸ ಹಣಕಾಸು ಕೊಡುಗೆಗಳನ್ನು ಸ್ಥಗಿತಗೊಳಿಸಿದೆ.
ಶ್ರೀಲಂಕಾದಲ್ಲಿ ಅದಾನಿ ಬೆಂಬಲಿತ ಬಂದರು ಟರ್ಮಿನಲ್‌ಗಾಗಿ 553 ಮಿಲಿಯನ್ ಡಾಲರ್ ನೀಡುವುದಾಗಿ ಭರವಸೆ ನೀಡಿದ್ದ ಯುಎಸ್ ಇಂಟರ್‌ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಹಿಂದೆ ಸರಿಯುವ ಸೂಚನೆ ಇದೆ.
ಅದಾನಿ ಪವರ್‌ನ ಗೊಡ್ಡಾ ಕಲ್ಲಿದ್ದಲು ಆಧಾರಿತ ಸ್ಥಾವರಕ್ಕೆ ಸಂಬಂಧಿಸಿದ ಒಪ್ಪಂದ ಸೇರಿದಂತೆ ಹಿಂದಿನ ಆಡಳಿತದ ಅಡಿಯಲ್ಲಿ ಸಹಿ ಹಾಕಿದ ಇಂಧನ ಒಪ್ಪಂದಗಳ ಬಗ್ಗೆ ತನಿಖೆ ನಡೆಸಲು ಬಾಂಗ್ಲಾದೇಶದ ಸರ್ಕಾರ ಪರಿಶೀಲನಾ ಸಮಿತಿಯನ್ನು ರಚಿಸಿದೆ.
ಅದಾನಿ ಗ್ರೂಪಿನ ಅಂತಾರಾಷ್ಟ್ರೀಯ ವ್ಯವಹಾರವು ವ್ಯಾಪಕವಾಗಿದೆ ಮತ್ತು ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದಾದ್ಯಂತದ ಅದು ಕಾರ್‍ಯಾಚರಿಸುತ್ತಿದೆ.
ಇಸ್ರೇಲ್: ಹೈಫಾ ಬಂದರಿನಲ್ಲಿ ಅದಾಣಿ ಗ್ರೂಪ್ ಶೇ.70 ಪಾಲನ್ನು ಹೊಂದಿದೆ, ಇದು ದೇಶದ ವಾರ್ಷಿಕ ಸರಕು ಪ್ರಮಾಣಕ್ಕೆ ಶೇ.3 ಕೊಡುಗೆ ನೀಡುತ್ತದೆ.
ಆಸ್ಟ್ರೇಲಿಯಾ: ಕಾರ್ಮೈಕಲ್ ಕಲ್ಲಿದ್ದಲು ಗಣಿಯು ಜನಾಂಗೀಯ ಕಲಹ, ಸೀಮಿತ ಉತ್ಪಾದನಾ ಸಾಮರ್ಥ್ಯದ ಆರೋಪಗಳು ಸೇರಿದಂತೆ ನಾನಾ ಸವಾಲುಗಳನ್ನು ಎದುರಿಸುತ್ತಿದೆ.
ತಾಂಜೇನಿಯಾ: ಪೂರ್ವ ಆಫ್ರಿಕಾದ ಬಂದರು ಆಧುನೀಕರಿಸಲು 39.5 ದಶಲಕ್ಷ ಡಾಲರ್ ಪಾಲುದಾರಿಕೆ ಹೊಂದಿದೆ.
ವಿಯೆಟ್ನಾಂ: ವಿಮಾನ ನಿಲ್ದಾಣಗಳು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅದಾನಿ 3 ಬಿಲಿಯನ್ ಡಾಲರ್ ಬದ್ಧರಾಗಿದ್ದಾರೆ.