ತಿರುಪತಿ ಲಡ್ಡುನಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಅಂಶ ಪತ್ತೆಯಾದ ವಿವಾದವನ್ನು ಜನರು ಜೀರ್ಣಿಸಿಕೊಳ್ಳುವ ಮುನ್ನವೇ ಇದೀಗ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಿರುಪತಿ ದೇವಸ್ಥಾನದ ತಿಮ್ಮಪ್ಪನಂತೆ ರುಚಿಯಲ್ಲಿ ವಿಶ್ವವಿಖ್ಯಾತಿ ಪಡೆದಿದ್ದ ಲಡ್ಡು ಪ್ರಸಾದ ಕಳಪೆ ಗುಣಮಟ್ಟ ಹಾಗೂ ಕಲಬೆರಕೆಯಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ತಿರುಪತಿ ಲಡ್ಡುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದ ಮಹಿಳೆಗೆ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿದೆ. ಗುಟ್ಕಾ ಪ್ಯಾಕೇಟ್ ಲಡ್ಡುನಲ್ಲಿ ಇರುವ ಚಿತ್ರವನ್ನು ತೆಗೆದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಅಂದರೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಸಿಗುತ್ತಿರುವುದು ಇದೇ ಮೊದಲಲ್ಲ. 2012ರಲ್ಲಿ ಕೂಡ ಇದೇ ರೀತಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿತ್ತು.
ಲಡ್ಡು ತಯಾರಿಸಲು ತುಪ್ಪ ಸೇರಿದಂತೆ ಎಲ್ಲಾ ಪದಾರ್ಥಗಳ ಪರೀಕ್ಷೆ ನಂತರ ಒಳಗೆ ಬರುತ್ತದೆ. ಅಲ್ಲದೇ ಬ್ರಾಹ್ಮಣರೇ ಲಡ್ಡು ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಹೊರತು ಇತರರಿಗೆ ಅವಕಾಶವಿಲ್ಲ. ಹಾಗಾದರೆ ಗುಟ್ಕಾ ಲಡ್ಡುನಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಕಾಡುತ್ತಿದೆ.
ಗುಟ್ಕಾ ಪ್ಯಾಕೆಟ್ ಲಡ್ಡುನಲ್ಲಿ ಸಿಕ್ಕಿದೆ ಅಂದರೆ ಲಡ್ಡು ತಯಾರಿಸುವವರೇ ಯಾರೋ ಗುಟ್ಕಾ ಸೇವಿಸುವ ಅಭ್ಯಾಸ ಹೊಂದಿದ್ದು, ಅಜಾಗರೂಕರತೆಯಿಂದ ಪ್ಯಾಕೇಟ್ ಎಸೆದು ಅದು ಲಡ್ಡೂನಲ್ಲಿ ಸೇರಿದೆ ಎಂದು ಸಂಶಯಪಡಲಾಗುತ್ತಿದೆ.