ಮಾಜಿ ಸಂಸದರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಇದೀಗ ಸೋದರ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಸತತ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಸೂರಜ್ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದೆ. ಇದರಿಂದ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ.
ಕೆಲಸ ಕೇಳಲು ಬಂದ ಜೆಡಿಎಸ್ ಕಾರ್ಯಕರ್ತನ ಜೊತೆಯೇ ಅಸಹಜ ಲೈಂಗಿಕ ದೌರ್ಜನ್ಯದ ಎಸಗಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಇದರ ಬೆನ್ನಲ್ಲೇ ನನ್ನ ಬಳಿ ಕೆಲಸ ಕೇಳುವ ನೆಪದಲ್ಲಿ 5 ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ. ನಾನು ಕೊಡಲ್ಲ ಎಂದು ಹೇಳಿದ್ದಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಸೂರಜ್ ರೇವಣ್ಣ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಜೆಡಿಎಸ್ ವಿಧಾನ ಪರಿಷತ್ ಸದಸ್ಯಡಾ.ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಲೈಂಗಿಕ ದೌರ್ಜನ್ಯ ಮಾಡಿರೋದಾಗಿ ಸುಳ್ಳು ಹೇಳೋದಾಗಿ ಬೆದರಿಸಿ 5 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸೂರಜ್ ರೇವಣ್ಣ ಆಪ್ತ ನೀಡಿರುವ ದೂರಿನಲ್ಲಿ ಏನಿದೆ?
ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ನನ್ನ ಬಳಿ ಬಂದು ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಹೋಗಿದ್ದ ಸಂತ್ರಸ್ತ, ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಬ್ಲಾಕ್ ಮೇಲ್ ಮಾಡಿದ್ದಾನೆ.
ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ, ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು, ನೀನು ನಿಮ್ಮ ಬಾಸ್ ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ ಎಂದು ಬೆದರಿಕೆ ಹಾಕಿದ್ರು, ಈ ವಿಚಾರವನ್ನು ನಾನು ನಮ್ಮ ಬಾಸ್ ಗೆ ತಿಳಿಸಿದೆ.
ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಗಾಗಿ ಇದ್ದ ಪೊಲೀಸ್ ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು ಎಂದು ಬಾಸ್ ಹೇಳಿದರು ಎಂದು ದೂರಿನಲ್ಲಿ ಶಿವಕುಮಾರ್ ತಿಳಿಸಿದ್ದಾರೆ.
ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್ಸಿ ಸೀಲ್ ಹಾಕಿಸಿ ಫೋಟೊ ಹಾಕಿ ಬೆದರಿಕೆ ಹಾಕಿದ್ದಾನೆ. ಮೆಡಿಕೊ ಲೀಗಲ್ ಕೇಸ್ ಸೀಲ್ ಇರೊ ಆಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ. ಐದು ಕೋಟಿ ಬಳಿಕ ಮೂರು ಕೋಟಿ ಅಥವಾ ಕಡೆಗೆ ಎರಡುವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದ.
ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡೋರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾಧ್ಯಮದ ಮುಂದೆ ಹೋಗ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡೋದಾಗಿ ಬೆದರಿಕೆ ಹಾಕಿದ್ರು ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ನೀಡಿರುವ ದೂರಿನ ಮೇರೆಗೆ ಹೊಳೆನರಸೀಪುರ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.