ನನಗೀಗ 83 ವರ್ಷ. ಈ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವೆ. ಒಂದು ವೇಳೆ ಕಾರ್ಯಕರ್ತರು ಬಯಸಿದರೆ ಕಣಕ್ಕಿಳಿಯುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಈ ರೀತಿ ಉತ್ತರಿಸಿದರು.
ಮಲ್ಲಿಕಾರ್ಜುನ ಖರ್ಗೆ 2009ರಲ್ಲಿ ಲೋಕಸಭೆ ಪ್ರವೇಶಿಸಿದ್ದು, 2014ರಲ್ಲಿ ಗೆಲುವು ಕಂಡಿದ್ದರು. 2019ರಲ್ಲಿ ಮೊದಲ ಬಾರಿ ಸೋಲುಂಡಿದ್ದರು.
ಪಕ್ಷದ ಹಿರಿಯರು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದೇಕೆ ಎಂಬ ಪ್ರಶ್ನೆಗೆ ಆ ರೀತಿ ಏನೂ ಇಲ್ಲ. ನನಗೆ ಈಗ 83 ವರ್ಷ. ನೀವು (ಪತ್ರಕರ್ತರು) 60-65 ವರ್ಷಕ್ಕೆ ನಿವೃತ್ತಿ ಪಡೆಯುತ್ತೀರಿ. ನಾನು 83 ಆದ ಮೇಲೆ ನಿವೃತ್ತಿ ಪಡೆಯುವುದು ತಪ್ಪೇ ಎಂದು ಪ್ರಶ್ನಿಸಿದರು.