13 ವರ್ಷದ ಹಳೆಯ ಸೇತುವೆ ಭಾಗಶಃ ಕುಸಿದಿರುವ ಘಟನೆ ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಸಂಭವಿಸಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಸಂಭವಿಸಿದ 4ನೇ ಸೇತುವೆ ಕುಸಿದ ಪ್ರಕರಣವಾಗಿದೆ.
ಬನ್ಸ್ ಬಾರಿ ಶ್ರವಣ್ ಚೌಕ್ ಬಳಿ ಮರಿಯಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 70 ಅಡಿ ಉದ್ದದ ಸೇತುವೆ ನೀರಿನ ಬಿರುಸಿನ ಹರಿವಿನಿಂದ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡ ಪ್ರಕರಣ ವರದಿಯಾಗಿಲ್ಲ.
ನದಿ ನೀರು ಹರಿಯತ್ತಿರುವ ವೇಗಕ್ಕೆ ಸೇತುವೆ ಅಲ್ಲಾಡುತ್ತಾ ಕುಸಿದು ಬಿದ್ದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೇತುವೆಯನ್ನು 2011ರಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಉದ್ಘಾಟನೆಯಾದ 6 ತಿಂಗಳಲ್ಲಿ ಸೇತುವೆ ಹಾನಿಯೊಳಗಾಗಿದ್ದು, ದುರಸ್ತಿ ಮಾಡಲಾಗಿತ್ತು.
ಈ ಸೇತುವೆ ನಗರವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಆಗಿದ್ದು, ಕೂಡಲೇ ದುರಸ್ಥಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸೇತುವೆ ಕುಸಿತಕ್ಕೂ ಮುನ್ನ ಸಿವಾನ್ ಮತ್ತು ಅರೆರಿಯಾ ಜಿಲ್ಲೆಗಳಲ್ಲಿ ಕೂಡ ಸೇತುವೆ ಕುಸಿದು ಬಿದ್ದಿದ್ದವು. ಕೆಲವು ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕುಸಿದರೆ ಇನ್ನೊಂದು ನಿರ್ಮಾಣ ಹಂತದಲ್ಲೇ ಕುಸಿದಿತ್ತು.