10 ಆಟಗಾರರ ಕೊಲಂಬಿಯಾ ತಂಡ 1-0 ಗೋಲಿನಿಂದ ಉರುಗ್ವೆ ತಂಡವನ್ನು ಸೋಲಿಸಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ. ಪ್ರಶಸ್ತಿ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಚಾರ್ಲೊಟೆಯಲ್ಲಿ ಗುರುವಾರ ಮುಂಜಾನೆ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕೊಲಂಬಿಯಾ ತಂಡ ಸುಮಾರು 45 ನಿಮಿಷಗಳ ಕಾಲ 10 ಆಟಗಾರರೊಂದಿಗೆ ಆಡಿತು.
ಜೆಫರ್ಸನ್ ಲೆರ್ಮಾ ಪಂದ್ಯದ ಮೊದಲ ಅವಧಿಯಲ್ಲಿ ಗಳಿಸಿದ ಏಕೈಕ ಗೋಲನ್ನು ಕಾಯ್ದುಕೊಂಡು ಎದುರಾಳಿಗೆ ಗೋಲು ಬಿಟ್ಟುಕೊಡದೇ ರೋಚಕ ಜಯ ಸಾಧಿಸಿತು. ಅದರಲ್ಲೂ ಕೊನೆಯ 45 ನಿಮಿಷಗಳ ಆಟದಲ್ಲಿ 10 ಆಟಗಾರರೇ ಇದ್ದರೂ ಉರುಗ್ವೆಗೆ ಗೋಲು ಬಿಟ್ಟುಕೊಡದೇ ರೋಚಕ ಜಯ ಸಾಧಿಸಿತು.
ಟೂರ್ನಿಯಲ್ಲಿ ಆಡಿದ 21 ಪಂದ್ಯಗಳಲ್ಲಿ ಸೋಲರಿಯದ ತಂಡ ಎಂಬ ಅಜೇಯ ದಾಖಲೆಯೊಂದಿಗೆ 2001ರ ನಂತರ ಇದೇ ಮೊದಲ ಬಾರಿಗೆ ಕೊಲಂಬಿಯಾ ಫೈನಲ್ ಪ್ರವೇಶಿಸಿದೆ. ಫೈನಲ್ ನಲ್ಲಿ ವಿಶ್ವದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ನೇತೃತ್ವದ ಪ್ರಬಲ ಅರ್ಜೆಂಟೀನಾ ತಂಡದ ಸವಾಲನ್ನು ಎದುರಿಸಲಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಸೋಲಿನ ಆಘಾತದಿಂದ ಚೇತರಿಸಿಕೊಳ್ಳದ ಉರುಗ್ವೆ ಆಟಗಾರ ಕೊಲಂಬಿಯಾ ಆಟಗಾರರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.