ಮುಂದಿನ ಎರಡು ತಿಂಗಳ ಅವಧಿಯಲ್ಲಿ ಆಮ್ ಆದ್ಮಿ ಪಕ್ಷದ ಇನ್ನೂ ನಾಲ್ವರು ಸಚಿವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ದೆಹಲಿ ಸಚಿವೆ ಅತಿಶಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಚಾರಣೆ ವೇಳೆ ಇಬ್ಬರು ಸಚಿವರ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂಬ ಸುದ್ದಿ ಹರಡಿಸಲಾಗುತ್ತಿದೆ. ಬಿಜೆಪಿಗೆ ಸೇರುವ ಆಹ್ವಾನ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಪ್ ಆದ್ಮಿ ಪಕ್ಷದ ನಾಲ್ವರು ಸಚಿವರನ್ನು ಬಂಧಿಸುವ ಸಾಧ್ಯತೆ ಇದೆ.
ಬಿಜೆಪಿ ಸೇರುವ ಆಹ್ವಾನ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಡಿ, ಸಿಬಿಐ ಹಾಗೂ ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ನನ್ನನ್ನು ಮಾತ್ರವಲ್ಲದೇ ಸಚಿವರಾದ ಸೌರಭ್ ಭಾರಧ್ವಾಜ್, ರಾಘವ್ ಚಡ್ಡಾ ಮತ್ತು ಶಾಸಕ ದುರೇಶ್ ಪಾರಖ್ ಅವರನ್ನು ಬಂಧಿಸಲು ತಂತ್ರ ರೂಪಿಸಿದೆ ಎಂದು ಆರೋಪಿಸಿದರು.
ನನಗೆ ಆಪ್ತರಾಗಿರುವ ಒಬ್ಬರ ಮೂಲಕ ಸಂಪರ್ಕಿಸಿದ ಬಿಜೆಪಿ ರಾಜಕೀಯ ಜೀವನ ಉತ್ತಮವಾಗಿರಬೇಕಾದರೆ ಬಿಜೆಪಿಗೆ ಸೇರಬೇಕು. ಇಲ್ಲದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ನಾನು ಬಿಜೆಪಿ ಸೇರುವ ಆಮೀಷ ತಿರಸ್ಕರಿಸಿದ್ದೇನೆ ಎಂದರು.
ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬರನ್ನು ರಾಜಕೀಯವಾಗಿ ಮುಗಿಸುವುದಾಗಿ ನನ್ನನ್ನು ಸಂಪರ್ಕಿಸಿದ ವ್ಯಕ್ತಿ ಬೆದರಿಕೆ ಹಾಕಿದ್ದಾರೆ. ಅವರು ಹೇಳಿದಂತೆ ಆಪ್ ಸಚಿವರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ ಎಂದು ಅತಿಶಿ ಹೇಳಿದರು.