ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರೆ ಎರಡೇ ತಿಂಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮದ್ಯ ನೀತಿ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ಲೋಕಸಭಾ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಹಿರಿಯರನ್ನೇ ಮೂಲೆಗುಂಪು ಮಾಡಿದ ಮೋದಿ, ಈಗ ಸರ್ವಾಧಿಕಾರಿಯಾಗಿ ಮೆರೆಯಲು ಇತರೆ ನಾಯಕರನ್ನು ಬಲಿಪಶು ಮಾಡಲಿದ್ದಾರೆ ಎಂದರು.
75 ವರ್ಷ ಆಗಿದೆ ಎಂಬ ನೆಪವೊಡ್ಡಿ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ ಜೋಷಿ, ಉಮಾಭಾರತಿ, ಶಿವರಾಜ್ ಸಿಂಗ್ ಚೌಹಾಣ್, ವಸುಂಧರ ರಾಜೆ, ಮುಂತಾದವರ ರಾಜಕೀಯ ಜೀವನ ಅಂತ್ಯಗೊಳಿಸಿದ ಪ್ರಧಾನಿ ಮೋದಿಗೆ ಮುಂದಿನ ಗುರಿ ಯೋಗಿ ಆದಿತ್ಯನಾಥ್ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಒಂದು ದೇಶ, ಒಬ್ಬನೇ ನಾಯಕ ಆಗಲು ಎಲ್ಲಾ ರಾಜಕೀಯ ಪಕ್ಷಗಳನ್ನು ಮುಗಿಸುತ್ತಿದ್ದಾರೆ. ಅದರ ಜೊತೆಯಲ್ಲೇ ತಮಗೆ ಪ್ರತಿಸ್ಪರ್ಧಿ ಇರಬಾರದು ಎಂಬ ಕಾರಣಕ್ಕೆ ತಮ್ಮದೇ ಪಕ್ಷದ ನಾಯಕರನ್ನು ಬೆಳೆಯಲು ಬಿಡದೇ ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ವಿವರಿಸಿದರು.