ಅಯೋಧ್ಯೆಯಲ್ಲಿ ತರಾತುರಿಯಲ್ಲಿ ನಿರ್ಮಾಣವಾಗಿ 6 ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾದ ಪ್ರತಿಷ್ಠಿತ ಅಯೋಧ್ಯೆಯ ರಾಮಮಂದಿರ (Ayodhya Ram Mandir) ಮುಂಗಾರು ಮಳೆಯ ಆರಂಭದಲ್ಲೇ ಸೋರುತಿದೆ.
ರಾಮಮಂದಿರ ಟ್ರಸ್ಟ್ ಮುಖ್ಯ ಪೂಜಾರಿ ಸತ್ಯೇಂದ್ರ ದಾಸ್, ರಾಮಮಂದಿರ ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಸೋರಿಕೆ ಕಂಡು ಬಂದಿರುವುದಕ್ಕೆ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
ಜನವರಿ 22ರಂದು ಈ ದೇವಸ್ಥಾನ ಉದ್ಘಾಟನೆ ಆಗಿದೆ. ಇಷ್ಟೊಂದು ಇಂಜಿನಿಯರ್ ಗಳು, ತಂತ್ರಜ್ಞರು ಇದ್ದರೂ ಈ ಲೋಪ ಹೇಗೆ ಆಯಿತು ಎಂದು ತಿಳಿಯುತ್ತಿಲ್ಲ. ಕೂಡಲೇ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಮುಂಗಾರಿನ ಮೊದಲ ಮಳೆಗೆ ರಾಮಮಂದಿರ ಸೋರುತಿದೆ. ಅದರಲ್ಲೂ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಾಡಲಾದ ಗರ್ಭಗುಡಿಯ ಸಮೀಪವೇ ನಿರ್ದಿಷ್ಟವಾಗಿ ಸೋರುತಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೇ ಇರುವ ಕಾರಣ ಸೋರಿಕೆ ಆಗುತ್ತಿದೆ ಎಂದು ಸತ್ಯೇಂದ್ರ ದಾಸ್ ವಿವರಿಸಿದ್ದಾರೆ.
2025 ಜುಲೈಗೆ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಈ ರೀತಿ ತರಾತುರಿಯಲ್ಲಿ ಮಾಡಿದರೆ ಪರಿಪೂರ್ಣ ಮಂದಿರ ಆಗುವುದು ಅನುಮಾನ. ಅಲ್ಲದೇ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವೂ ಇಲ್ಲ ಎಂದು ಅವರು ಹೇಳಿದರು.
ಮೊದಲ ಮಳೆಗೆ ರಾಮಮಂದಿರದ ಗರ್ಭಗುಡಿ ಬಳಿ ಸೋರಿಕೆ ಆಗುತ್ತಿರುವುದರಿಂದ ಪೂಜೆ ಮತ್ತು ಭಕ್ತರ ದರ್ಶನಕ್ಕೆ ತೊಂದರೆ ಆಗುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ಕಿರಿಕಿರಿಯೂ ಆಗುತ್ತಿದೆ ಎಂದು ಅವರು ಹೇಳಿದರು.
2024 ಜನವರಿ 22ರಂದು ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿ ಚುನಾವಣೆಗೆ ರಾಜಕೀಯವಾಗಿ ರಾಮನನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿತ್ತು.