ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನ ಮೊತ್ತದ ಹಂಚಿಕೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಗೆ ಪ್ರಯಾಣಿಸಿದ ಭಾರತ ತಂಡದಲ್ಲಿ 42 ಮಂದಿ ಇದ್ದರು. ಇದರಲ್ಲಿ 15 ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಮೀಸಲು ಆಟಗಾರರು ಸೇರಿದ್ದಾರೆ.
ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನ ಮೊತ್ತ ಕೇವಲ ಆಟಗಾರರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ತಂಡದಲ್ಲಿದ್ದ ಎಲ್ಲಾ 42 ಮಂದಿಗೆ ಸೇರಿದ್ದಾಗಿತ್ತು. ಅದರಲ್ಲೂ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಗೂ ಸೇರುವುದು ವಿಶೇಷ. ಹಾಗಂತ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡದೇ ಅವರ ಸ್ಥಾನಮಾನ ಮತ್ತು ಪ್ರದರ್ಶನಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ.
ಭಾರತ ತಂಡದಲ್ಲಿದ್ದ ಎಲ್ಲಾ 15 ಆಟಗಾರರಿಗೆ ತಲಾ 5 ಕೋಟಿ ಸಿಗಲಿದೆ. ಇದರಲ್ಲಿ ಮೈದಾನಕ್ಕಿಳಿಯದ ಆಟಗಾರರಿಗೂ ಸಿಗಲಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಪ್ರತ್ಯೇಕವಾಗಿ 5 ಕೋಟಿ ರೂ. ಲಭಿಸಲಿದೆ.
ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಬೌಲಿಂಗ್ ಕೋಚ್ ಪಾರಸ್ ಮೊಹಬ್ರಿ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಗೆ ತಲಾ 2.5 ಕೋಟಿ ರೂ. ಸಿಗಲಿದೆ. ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂ. ಲಭಿಸಲಿದೆ.
ಫಿಜಿಯೊಥೆರಪಿಸ್ಟ್, ಆಟಗಾರರ ಬಲ ಮತ್ತು ಸ್ಥಿರ ಆರೋಗ್ಯ ಉಸ್ತುವಾರಿ, ಫಿಟ್ನೆಸ್ ತಜ್ಞರು ಸೇರಿದಂತೆ ಸಹಾಯಕ ಸಿಬ್ಬಂದಿಗೆ ತಲಾ 2 ಕೋಟಿ ರೂ. ಮತ್ತು ಮೀಸಲು ಆಟಗಾರರಾದ ಶುಭಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್ ಕೂಡ ತಲಾ 1 ಕೋಟಿ ರೂ. ಬಹುಮಾನ ಮೊತ್ತ ಗಳಿಸಲಿದ್ದಾರೆ.
ಬಿಸಿಸಿಐ ಪ್ರತಿಯೊಬ್ಬರಿಗೂ ಸಿಗಬೇಕಾದ ಮೊತ್ತವನ್ನು ಹಂಚಿಕೆ ಮಾಡಿ ಬಿಲ್ ಕಳುಹಿಸಿಕೊಡುವಂತೆ ಸೂಚಿಸಿದೆ. ಬಿಲ್ ಆಧರಿಸಿ ಅವರ ಖಾತೆಗಳಿಗೆ ಹಣ ಜಮೆಯಾಗಲಿದೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರಿಗೆ 11 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.