ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುನ್ನಡೆಯತ್ತ ದಾಪುಗಾಲಿರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಶನಿವಾರ 3 ವಿಕೆಟ್ ಗೆ 231 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮಕ್ಕೂ ಮುನ್ನ 3 ವಿಕೆಟ್ ಗೆ 322 ರನ್ ಗಳಿಸಿದೆ.
ನಿನ್ನೆ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಖಾನ್ ಶತಕ ಪೂರೈಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಂಪಾದಿಸಿದರು. ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸರ್ಫರಾಜ್ ಖಾನ್ ಎರಡನೇ ಇನಿಂಗ್ಸ್ ನಲ್ಲಿ ಭರ್ಜರಿ ಆಟದಿಂದ ತಂಡವನ್ನು ಆಧರಿಸಿದರು.
110 ಎಸೆತಗಳಲ್ಲಿ ಶತಕ ಪೂರೈಸಿದ ಸರ್ಫರಾಜ್ ಖಾನ್ 142 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 115 ರನ್ ಬಾರಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಅಲ್ಲದೇ 41 ರನ್ ಗಳಿಸಿದ ರಿಷಭ್ ಪಂತ್ ಜೊತೆಗೂಡಿ 4ನೇ ವಿಕೆಟ್ ಗೆ 100 ರನ್ ಜೊತೆಯಾಟ ನಿಭಾಯಿಸಿದ್ದಾರೆ. ಭಾರತ ಮುನ್ನಡೆಯತ್ತ ದಾಪುಗಾಲಿರಿಸಿದೆ.