ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋದ ವಾಯುಪಡೆಯ ಮಾಜಿ ಅಧಿಕಾರಿಯ ಜೀವ ಉಳಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವಾಯುಪಡೆಯ ಮಾಜಿ ಅಧಿಕಾರಿ ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ (49)ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಇದರಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ನಮ್ಮ ಮೆಟ್ರೋ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಗಮಿಸಿದ ಅಧಿಕಾರಿಯು ರೈಲು ಹಳಿಗೆ ಜಿಗಿದು ಅಲ್ಲೇ ಮಲಗಿದ್ದಾರೆ. ಇದನ್ನು ನೋಡಿದ ರೈಲು ಚಾಲಕ (ಲೋಕೋ ಪೈಲಟ್) ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕ ಬಂದ್ ಮಾಡಿ ಹಳಿಗೆ ಇಳಿದು ಅವನ್ನು ರಕ್ಷಣೆ ಮಾಡಿದ್ದಾರೆ.ಈ ಘಟನೆಯಿಂದ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಸಕಾಲದಲ್ಲಿ ರೈಲು ಸಿಗದೆ ಪರದಾಟಿದರು
ಈ ಅವಧಿಯಲ್ಲಿ 10.25 ಗಂಟೆಯಿಂದ 10.50 ಗಂಟೆಯವರೆಗೆ 4 ರೈಲುಗಳನ್ನು ಮಾದಾವರ ಮೆಟ್ರೊ ನಿಲ್ದಾಣದವರೆಗೆ ಬದಲಾಗಿ ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ನಡುವೆ ಮಾತ್ರ ಸಂಚಾರ ನಡೆಸಿವೆ.ಅ ನಂತರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳ ಸಾಮಾನ್ಯತೆದಂತೆ 11 ಗಂಟೆಗೆ ಪುನರಾರಂಭವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಅವರಿಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಂ ಇಟಿಎಸ್ ಅನ್ನು ಸಿಬ್ಬಂದಿ ಬಳಸಿ ಅವರನ್ನು ರಕ್ಷಿಸಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.