ಜಾಲಿ ರೈಡಿಗೆ 7 ಮಂದಿ ಮೃತಪಟ್ಟ ದಾರುಣ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತಕ್ಕೆ 5 ಯುವಕರು ಮೃತಪಟ್ಟ ದಾರುಣ ಘಟನೆ ಮಹಾಶಿವರಾತ್ರಿಯಂದೇ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ- ದಾಬಸ್ ಪೇಟೆ ಹೆದ್ದಾರಿಯಲ್ಲಿ 2 ದಿನಗಳ ಹಿಂದೆ ನಡೆದ ಜಾಲಿ ರೈಡಿಗೆ 6 ಯುವಕರು ಸೇರಿ 7 ಮಂದಿ ಅಸುನೀಗಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಜಾಲಿ ರೈಡಿಗೆ ಹೊರಟ ಯುವಕರ ಕಾರು ಅಪಘಾತಕ್ಕೆ ಒಳಗಾಗಿ 5 ಮಂದಿ ಅಸುನೀಗಿದ್ದಾರೆ.
ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿಯ ಫ್ಲೈಓವರ್ ಮೇಲೆ ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಅತಿವೇಗದಲ್ಲಿ ಚಲಿಸುತ್ತಿದ್ದ ಕಾಋು ಡಿವೈಡರ್ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದೆ.
ಅಪಘಾತದಲ್ಲಿ ದೊಡ್ಡಬಳ್ಳಾಪುರ ನಿವಾಸಿಗಳಾದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಹಾಗೂ ಧನುಷ್ (20) ಮೃತಪಟ್ಟಿದ್ದಾರೆ.
ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದ್ದ ವೇಗಕ್ಕೆ ಹಾರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಬಸ್ನ ಮುಂಭಾಗ ಸಹ ಜಖಂ ಆಗಿದೆ. ಬಸ್ನಲ್ಲಿದ್ದ 43 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸ್ನೇಹಿತರೆಲ್ಲರೂ ಜೊತೆಯಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


