Thursday, December 25, 2025
Google search engine
Homeಬೆಂಗಳೂರುಬೆಂಗಳೂರು-ತುಮಕೂರು-ರಾಮನಗರ ವರ್ತುಲ ರಸ್ತೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಮ್ಮತಿ

ಬೆಂಗಳೂರು-ತುಮಕೂರು-ರಾಮನಗರ ವರ್ತುಲ ರಸ್ತೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಮ್ಮತಿ

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ವಾಹನ ದಟ್ಟಣೆ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್) ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ  ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿ ಬುಧವಾರ ಸಚಿವ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾದ ಕುಮಾರಸ್ವಾಮಿ ಅವರು; ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸಚಿವರಲ್ಲಿ ಮನವಿ ಮಾಡಿದರು.

ಕುಮಾರಸ್ವಾಮಿ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಗಡ್ಕರಿ ಅವರು; ಆದಷ್ಟು ಬೇಗ ಯೋಜನೆಯ ಪ್ರಸ್ತಾವನೆಯನ್ನು ‘ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ’ (Public Private Partnership Appraisal Committee – PPPAC) ಮುಂದೆ ಮಂಡಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವುಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಏನಿದು ಉಪನಗರ ವರ್ತುಲ ರಸ್ತೆ?

ಉಪನಗರ ವರ್ತುಲ ರಸ್ತೆ ಯೋಜನೆ (Satellite Town Ring Road-STRR) 2013ರಲ್ಲಿಯೇ ಚಾಲನೆ ಪಡೆದಿತ್ತು. ಆದರೆ, ನಾನಾ ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಬೆಂಗಳೂರು ಸುತ್ತಮುತ್ತ ಇರುವ ಎಂಟು ಕೈಗಾರಿಕಾ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.

ನಾಲ್ಕರಿಂದ ಆರು ಪಥಗಳ ಈ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಹಾಗೂ ಬೆಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ಹೈವೇಯನ್ನು ಕೂಡುತ್ತದೆ. ಜತೆಗೆ ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ.

ಈ ಉಪನಗರ ವರ್ತುಲ ರಸ್ತೆಯನ್ನು ಬೆಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿಯ ಸಂಪರ್ಕಗೊಳಿಸಲಾಗುವುದು. ಕೈಗಾರಿಕೆಗಳಿಗೆ ಸರಕು ಸರಂಜಾಮು ಸಾಗಿಸುವ ಯಾವುದೇ ಬೃಹತ್ ವಾಹನ ಬೆಂಗಳೂರು ನಗರದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವುದೇ ಈ ಯೋಜನೆಯ ಉದ್ದೇಶವಾಗಿದೆ.

2018ರಿಂದ ನೆನೆಗುದಿಗೆ ಬಿದ್ದಿದ್ದ ಉಪನಗರ ಹೊರ ವರ್ತುಲ ರಸ್ತೆ ಯೋಜನೆಗೆ ಗಡ್ಕರಿ ಅವರ ಒಪ್ಪಿಗೆ ಹಾಗೂ ಕುಮಾರಸ್ವಾಮಿ ಅವರ ಒಪ್ಪಿಗೆಯೊಂದಿಗೆ ಮೋಕ್ಷ ಸಿಕ್ಕಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಈ ಯೋಜನೆಯಿಂದ ಹೆಚ್ಚು ಲಾಭವಾಗಲಿದೆ. ಮುಖ್ಯವಾಗಿ ಬೆಂಗಳೂರು ನಗರದ ಮೇಲೆ ಸಂಚಾರದ ಒತ್ತಡ ಕಡಿಮೆ ಆಗಲಿದೆ.

ಕುಮಾರಸ್ವಾಮಿ ಹೇಳಿದ್ದೇನು?

ಎಂಟು ವರ್ಷಗಳಿಂದ ಬಾಕಿ ಇದ್ದ ಭೂಸ್ವಾಧೀನ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ಪಾವತಿ ಮಾಡಲು ಸಚಿವ ಗಡ್ಕರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಮನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು 135 ಕಿ.ಮೀ. ದೂರ ಹಾದು  ಹೋಗಲಿದ್ದು, ಯೋಜನೆಯ ಸುಮಾರು 4,750 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತ ಆಗುತ್ತಿದೆ. 4 ರಿಂದ 6 ಪಥ ಹೊಂದಿರುವ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಯಾವುದೇ ಅಡೆತಡೆಗಳಿಲ್ಲದೆ ಸಂಚಾರ ಸೌಲಭ್ಯ ಕಲ್ಪಿಸಲಿದೆ. ಬೆಂಗಳೂರು ಸುತ್ತಲಿನ ಉಪ ನಗರಗಳ ಮೂಲಕ ರಸ್ತೆ ಹಾದು ಹೋಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments