ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಅಪಮಾನಿಸಿದ್ದ ಬಿಹಾರ ಮೂಲದ ಮಹಿಳೆ ಹಾಗೂ ಆತನ ಪತಿ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ.
ಆಟೋ ಚಾಲಕನಿಗೆ ಚಪ್ಪಲಿಯಿಂದ ಬಿಹಾರ ಮೂಲದ ಮಹಿಳೆ ಪಂಕುರಿ ಮಿಶ್ರಾ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದರು.
ಪತಿ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಆಟೋ ಕಾಲಿಗೆ ಟಚ್ ಆಗಿದೆ ಎಂದು ಗಲಾಟೆ ಮಾಡಿದ ಮಹಿಳೆ ಬಾಯಿಗೆ ಬಂದಂತೆ ನಿಂದಿಸಿದ್ದೂ ಅಲ್ಲದೇ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೂ ಅಲ್ಲದೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಬೆನ್ನಲ್ಲೇ ಬೆಳ್ಳಂದೂರು ಪೊಲೀಸರು ಬಂಧಿಸಿದ್ದು, ನಂತರ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಪಂಕುರಿ ಮಿಶ್ರಾ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೋರಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ ಆಟೋ ಚಾಲಕ ಅಪಮಾನದಿಂದ ನಾನು ತಲೆ ಎತ್ತಲು ಆಗದಂತೆ ಆಗಿದೆ. ಯಾವುದೇ ಕಾರಣಕ್ಕೂ ಪ್ರಕರಣ ಹಿಂದೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನ ಬಳಿ ಕ್ಷಮೆಯಾಚಿಸಿದ ದಂಪತಿ, ಎಲ್ಲಾ ಕನ್ನಡಿಗರು ನಮ್ಮನ್ನು ಕ್ಷಮಿಸಿ. ಆಟೋ ಚಾಲಕರ ಬಗ್ಗೆ ಗೌರವವಿದೆ. ಬೆಂಗಳೂರನ್ನು ಪ್ರೀತಿಸುತ್ತೇವೆ. ಇಲ್ಲಿನ ವಾತವರಣವನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.
https://twitter.com/safaspeaks/status/1928822601889259891
ನಾವು ಹೋಗುವಾಗ ಏನೋ ಘಟನೆ ಆಯ್ತು. ಬೇಕು ಬೇಕು ಅಂತ ಮಾಡಿದ್ದಲ್ಲ. ನಾನು ಕ್ಷಮೆ ಕೇಳುತ್ತೇನೆ. ನಾನು ಗರ್ಭಿಣಿ. ಗರ್ಭಪಾತ ಆಗುವ ಭಯದಲ್ಲಿ ಹೀಗೆ ಮಾತನಾಡಿದೆ. ಬೆಂಗಳೂರು ಅಂದರೆ ತುಂಬಾ ಇಷ್ಟ.ಬೆಂಗಳೂರು, ಬೆಂಗಳೂರು ಸಂಸ್ಕೃತಿಯನ್ನು ತುಂಬಾ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ ಎಂದು ಮಹಿಳೆ ಹೇಳಿದ್ದಾಳೆ
ಮಹಿಳೆಯ ಪತಿ ಮಾತನಾಡಿ, ನಾವು ಮೂರು ವರ್ಷದಿಂದ ಬೆಂಗಳೂರಿನಲ್ಲಿದ್ದೇವೆ. ತವರಿನಂತೆ ನಾವು ಇಷ್ಟ ಪಡುತ್ತೇವೆ. ನಮಗೆ ಬೆಂಗಳೂರು ಬಗ್ಗೆ ಯಾವುದೇ ನೆಗೆಟಿವ್ ಅಭಿಪ್ರಾಯಗಳಿಲ್ಲ. ಆಟೋ ಚಾಲಕರನ್ನು ಗೌರವಿಸುತ್ತೇವೆ ಎಂದರು.
ಘಟನೆ ಸಂಬಂಧ ಬೆಳ್ಳಂದೂರು (Bellandur) ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಭಾನುವಾರ ಪೊಲೀಸರು ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ, ಆಟೋ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ.


