ನಿಮ್ಮ ಮಗಳಿಗೆ ನಮ್ಮ ಮೆಟ್ರೋದಲ್ಲಿ ಕೆಲಸ ದೊರೆಯುವಂತೆ ನೋಡಿಕೊಳ್ಳಲಾಗುವುದು. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಉನ್ನತ ವ್ಯಾಸಂಗ ಮಾಡುವುದೇ ಅಪರೂಪ. ಅವರ ಪರವಾಗಿ ನಾವು ಬಲವಾಗಿ ನಿಲ್ಲಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಈ ಘಟನೆಯಲ್ಲಿ ಡಿಕೆ ಶಿವಕುಮಾರ್ ಭರವಸೆಗೆ ಹೆತ್ತತಾಯಿಯ ಕಣ್ಣಾಲಿಗಳು ತುಂಬಿ ಬಂದವು.
ಕೊರಟಗೆರೆದೊಡ್ಡಿಯ ಅನಿತಾ ಎಂಬುವರು ನನ್ನ ಮಗಳು ಶರಣ್ಯ ಬಿಇ ಓದಿದ್ದು. ಈ ಕ್ಷೇತ್ರದ ಹೆಣ್ಣುಮಗಳು, ನಿಮ್ಮ ಇಲಾಖಾ ವ್ಯಾಪ್ತಿಯಲ್ಲಿ ಕೆಲಸ ನೀಡಿ ಎಂದಾಗ ಡಿಸಿಎಂ ಅವರು ನಾನಿದ್ದೇನೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಇವರ ಜೊತೆಯಲ್ಲಿಯೇ ಮನವಿ ಸಲ್ಲಿಸಿದ, ಬಿಇ ಕಂಪ್ಯೂಟರ್ ಸೈನ್ಸ್ ಓದಿದ ದೊಡ್ಡಆಲಹಳ್ಳಿಯ ಭೈರವಿ.ಕೆ ಅವರ ಮನವಿಗೆ ಸ್ಪಂದಿಸಿ, “ನನ್ನ ಈ ದೂರವಾಣಿ ಸಂಖ್ಯೆಗೆ ನಿಮ್ಮಿಬ್ಬರ ರೆಸ್ಯೂಮ್ ಕಳಿಸಿ ಅಥವಾ ನನ್ನ ಮನೆಯ ಬಳಿ ಬಂದು ಭೇಟಿಯಾಗಿ ಪರಿಚಿತ ಕಂಪನಿಗಳಿಗೆ ತಿಳಿಸಿ ಕೆಲಸ ಕೊಡಿಸುವೆ ಎಂದು ಅವರು ನೀಡಿದರು.
ಹೆಣ್ಣುಮಕ್ಕಳು ಬಹಳ ದೂರದಿಂದ ಬಸ್ ಇಳಿದು ನಡೆದು ಬರಬೇಕು ಅವರು ಬರುವ ತನಕ ಜೀವ ಹೋದಂತೆ ಆಗುತ್ತದೆ ಆದ ಕಾರಣಕ್ಕೆ ನಮ್ಮ ಅರಸನಹಳ್ಳಿ ಹೊಸದೊಡ್ಡಿಗೆ ಬಸ್ ಬೇಕು ಎಂದು ವಿನೋದಮ್ಮ, ತಾರಾ, ರತ್ನಮ್ಮ ಅವರು ಕಣ್ಣೀರಾದರು.
ಇವರ ಕಣ್ಣೀರಿಗೆ ತಕ್ಷಣವೇ ಸ್ಪಂದಿಸಿದ ಡಿಸಿಎಂ, ಕನಕಪುರ ಡಿಪೋ ವ್ಯವಸ್ಥಾಪಕರಾದ ನರಸಿಂಹರಾಜು ಅವರನ್ನು ಕರೆದು, “ಮೂರು ದಿನದ ಒಳಗಾಗಿ ಬಸ್ ವ್ಯವಸ್ಥೆ ಮಾಡಿ ನನಗೆ ಖುದ್ದಾಗಿ ಮಾಹಿತಿ ನೀಡಬೇಕು” ಎಂದು ಖಡಕ್ ಸೂಚನೆ ನೀಡಿದರು.
ದೊಡ್ದ ಆಲಹಳ್ಳಿ ಆಂಜನಪ್ಪ ಅವರು ನನಗೆ ಇತ್ತೀಚಿಗೆ ಲಕ್ವ ಹೊಡೆದಿದ್ದು, ಬಸ್ ನಿಲ್ದಾಣ ಅಥವಾ ಪಟ್ಟಣದ ಜನನಿಬಿಢ ಪ್ರದೇಶದಲ್ಲಿ ಅಂಗಡಿ ಹಾಕಿಕೊಳ್ಳಲು ಸಹಾಯಧನ ನೀಡಬೇಕಾಗಿ ಮನವಿ ಮಾಡಿದಾಗ, “ಸ್ಥಳೀಯ ಮುಖಂಡರನ್ನು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಕರೆದು ಇವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ನಲ್ಲಹಳ್ಳಿ ಗ್ರಾಮದ ಸವಿತಾ ಅವರು ನಮ್ಮ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಸಮಸ್ಯೆಯಿದ್ದು ಇದನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಅವರು, “ಅರ್ಹರ ಪಟ್ಟಿಯನ್ನು ಗ್ರಾಮ ಪಂಚಾಯತಿ ಮೂಲಕ ತಯಾರಿಸಿ ಅದನ್ನು ಮಾಜಿ ಸಂಸದರಾದ ಸುರೇಶ್ ಅವರ ಗಮನಕ್ಕೆ ತನ್ನಿ ಎಂದರು.
ಕನಕಪುರದ ಚೈತ್ರ ತಾಲ್ಲೂಕು ಆಫೀಸ್ ಆವರಣದಲ್ಲಿ ಕ್ಯಾಂಟೀನ್ ತೆರೆಯಲು ಅವಕಾಶ ನೀಡಿ ಎನ್ನುವ ಮನವಿಗೆ, ಅಕ್ಕ ಕೆಫೆ ಅಥವಾ ಇಂದಿರಾ ಕ್ಯಾಂಟೀನ್ ತೆರೆಯಲು ಅವಕಾಶ ನೀಡುತ್ತೇವೆ. ನೀವು ಅಕ್ಕ ಕೆಫೆ ಯೋಜನೆಯ ಅಡಿ ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.
ನಲ್ಲಹಳ್ಳಿ ಅಜ್ಜೇಗೌಡರು ಸಾತನೂರು ಮಾರ್ಗವಾಗಿ ನಲ್ಲಹಳ್ಳಿಗೆ ಬಸ್ ವ್ಯವಸ್ಥೆ. ನಲ್ಲಹಳ್ಳಿಯಿಂದ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಗೆ ನೇರವಾಗಿ ಬಸ್ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಪಂಚಾಯತಿಗಳಲ್ಲಿ 17 ವರ್ಷದಿಂದ ಪುನರ್ ವಸತಿ ನೌಕರರು ಕೆಲಸ ಮಾಡುತ್ತಿದ್ದು ಇವರಿಗೆ ಕನಿಷ್ಠ ವೇತನ ಹಾಗೂ ಕೆಲಸ ಖಾಯಂ ಮಾಡುವಂತೆ ನಟರಾಜ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕನಕಪುರದ ಮಹಾದೇವಯ್ಯ ಅವರು ನನ್ನ ಮಗ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಸಹಾಯಕನಾಗಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಖಾಯಂ ಎಂದು ಅರ್ಜಿ ಕೊಟ್ಟರು. ಮರೀಗೌಡನಹಳ್ಳಿ ಚಂದ್ರಯ್ಯ ಅವರು ನಮ್ಮ ಪೌತಿ ಖಾತೆ ಬೇರೆಯವರ ಹೆಸರಿಗೆ ಹೋಗಿದ್ದು ಮತ್ತೆ ನಮ್ಮ ಹೆಸರಿಗೆ ಬರುವಂತೆ ಮಾಡಿ ಎಂದು ಮನವಿ ಮಾಡಿದರು.
ಕೃಷ್ಣೆಗೌಡ ಅವರು ನನ್ನ ಮೊಮ್ಮಗ ಬಿಇ ಓದಿದ್ದು ನಿಮ್ಮ ಸಂಸ್ಥೆಯಲ್ಲಿ ಕೆಲಸ ಕೊಡಿ ಎಂದಾಗ “ಮನೆಯ ಬಳಿ ಮೊಮ್ಮಗನ ಜೊತೆ ಬನ್ನಿ ಕೆಲಸ ಕೊಡಿಸುವೆ” ಎಂದು ಡಿಸಿಎಂ ಹೇಳಿದರು.
ಏಳಗಳ್ಳಿ ಗ್ರಾಮದ ಶಿವಸ್ವಾಮಿ ಅವರು ನನ್ನ ಜಮೀನಿಗೆ ದಾರಿ ಬಿಡದೆ ಸತಾಯಿಸುತ್ತಿದ್ದಾರೆ ಎಂದಾಗ, “ಕಾನೂನಾತ್ಮಕವಾಗಿ ಇವರ ಸಮಸ್ಯೆ ಪರಿಹರಿಸಿ” ಎಂದು ಪಕ್ಕದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 285, ಗ್ರಾಮ ಪಂಚಾಯ್ತಿಗೆ 105, ಬೆಸ್ಕಾಂ 10, ಪಿಂಚಣಿಗೆ ಸಂಬಂಧಿಸಿದಂತೆ ಕೆಲವು ಅರ್ಜಿ ಸೇರಿ ಸುಮಾರು 600 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಜನರ ಸಮಸ್ಯೆಗಳನ್ನು ಡಿಸಿಎಂ ಅವರ ಜೊತೆಗೂಡಿ ಮಾಜಿ ಸಂಸದ ಡಿಕೆ ಸುರೇಶ್ ಆಲಿಸಿದರು.
ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ, ನಾಡ ಕಚೇರಿ ಉದ್ಘಾಟನೆ
ಹುಟ್ಟೂರು ದೊಡ್ಡಆಲಹಳ್ಳಿಯಲ್ಲಿ ನಾಡಕಚೇರಿಯನ್ನು ಉದ್ಘಾಟನೆ ಮೂಲಕ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದರು.ನಂತರ ರೈತ ಸಂಪರ್ಕ ಕೇಂದ್ರ, ಅಂಚೆ ಕಚೇರಿ ಒಳಗೊಂಡ ನೂತನ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ವೀಕ್ಷಿಸಿದರು.
ನಂತರ ಬಾಗಿಲಿಗೆ ಬಂತು, ಸರಕಾರ ಸೇವೆಗೆ ಇರಲಿ ಸಹಕಾರ ಹಾಗೂ ಮರು ಸರ್ವೇ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮವನ್ನು ಶಿವಕುಮಾರ್ ಅವರು ಉದ್ಘಾಟಿಸಿದರು. ನಂತರ ನೂತನ ಪೌತಿ ಖಾತೆ ಪತ್ರವನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು. ಕೃಷಿ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ ಹಾಗೂ ಸೌಲಭ್ಯ ಪತ್ರ ವಿತರಣೆ ಮಾಡಿ ಸರ್ಕಾರದ ಪ್ರಯೋಜನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಭಾರತಿಯ ಸೇನೆಯಿಂದ ಇತ್ತೀಚಿಗೆ ನಿವೃತ್ತರಾದ ದೊಡ್ದ ಆಲಹಳ್ಳಿಯ ಸೈನಿಕ ಚಂದ್ರಶೇಖರ್ ಅವರನ್ನು ಸನ್ಮಾನಿಸಿದರು. ಉಯ್ಯಂಬಳ್ಳಿ ಹೋಬಳಿಯ ಫಲನುಭವಿಗಳಿಗೆ ಸಹಾಯಧನ, ಪಡಿತರ ಚೀಟಿ ಸಮಸ್ಯೆ, ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳಿಂದ ಮಂಜೂರಾದ ಯೋಜನೆಗಳ ಚೆಕ್ ಹಾಗೂ ಪರಿಹಾರ ಧನ ವಿತರಣೆ ನೀಡಿದರು.