ಮಕ್ಕಳು ಆತ್ಮಹತ್ಯಗೆ ಯತ್ನಿಸಿದ ಸುದ್ದಿ ತಿಳಿದು ನೊಂದ ಬಿಜೆಪಿ ಮುಖಂಡ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಹೊರ ವಲಯದ ನಾಗನೂರು ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಚಂದ್ರಶೇಖರ್ ಸಂಕೋಳ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಸ್ತಿಯಲ್ಲಿ ಕೂಡ ಸ್ಥಿತಿವಂತರಾಗಿದ್ದ ಚಂದ್ರಶೇಖರ್ ಸಂಕೋಳ್, ಮನುಷ್ಯರಿಗೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಕೂಡ ಅನ್ನದಾತನಾಗಿದ್ದರು. ಅಲ್ಲದೇ ಸಾಕಷ್ಟು ಸಮಾಜ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇಂತಹ ವ್ಯಕ್ತಿ ಕೌಟುಂಬಿಕ ಕಲಹಕ್ಕೆ ಮನನೊಂದು ಅತ್ಮಹತ್ಯೆ ದಾರಿ ಹಿಡಿದಿರುವುದು ಸ್ಥಳೀಯರಿಗೆ ಆಘಾತ ಉಂಟು ಮಾಡಿದೆ.
ಚಂದ್ರಶೇಖರ್ ಮಕ್ಕಳಾದ ಮಗ ನರೇಶ್ (20) ಮಗಳು ಪವಿತ್ರ (23) ಮನೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವಿಚಾರ ತಿಳಿದ ಚಂದ್ರಶೇಖರ್ ತಮ್ಮ ಜಮೀನಿನಲ್ಲಿ ಕಾರಿನಲ್ಲಿ ಕೂತು ಜೊತೆಗೆ ಟಯರ್‌ಗಳನ್ನಿಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಮನೂರು ಗ್ರಾಮದಲ್ಲಿ ಸಿಮೆಂಟ್, ಕಬ್ಬಿಣದ ಅಂಗಡಿಯನ್ನು ನಡೆಸುತ್ತಾ ಅವರು ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು. ಅಲ್ಲದೇ ಬಿಜೆಪಿಯ ಪ್ರಮುಖ ಮುಂಖಂಡನಾಗಿ ಪಕ್ಷ ಸಂಘಟನೆಯಲ್ಲಿ ಕೂಡ ಹೆಚ್ಚು ತೊಡಗಿಸಿಕೊಂಡಿದ್ದರು. ಅಡಿಕೆ ತೋಟ, ಕಾಂಪ್ಲೆಕ್ಸ್ ಗಳನ್ನು ಕೂಡ ಹೊಂದಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದು, ಈ ವಿಚಾರವಾಗಿ ಮನೆಯಲ್ಲಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಹಾಗೂ ಸೋಕೋ ಟೀಮ್ ಆಗಮಿಸಿ ಪರಿಶೀಲನೆ ನಡೆಸಿದೆ. ಕಾರಿನಲ್ಲಿದ್ದ ಚಂದ್ರಶೇಖರ್ ಮೃತದೇಹ ಸುಟ್ಟು ಕರಕಲಾಗಿದ್ದು, ಇಡೀ ಕಾರು ಅಸ್ಥಿಪಂಜರದಂತಾಗಿದೆ.



