ಜಾತಿ ನಿಂದನೆ, ಕೊಲೆ ಬೆದರಿಕೆ , ಹನಿಟ್ರ್ಯಾಪ್, ಏಡ್ಸ್ ಟ್ರ್ಯಾಪ್ ನಂತರ ಇದೀಗ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ದೂರು ಕೇಳಿ ಬಂದಿದ್ದು, ಕಾಮಗಾರಿ ನಡೆಸದೇ ಬಿಬಿಎಂಪಿಯ 500 ಕೋಟಿ ರೂ. ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದು, ಇದೀಗ ಬಿಬಿಎಂಪಿ ಅಧಿಕಾರಿಗಳನ್ನು ಬೆದರಿಸಿ 500 ಕೋಟಿ ರೂ. ಅನುದಾನದ ಮೊತ್ತವನ್ನು ಕಾಮಗಾರಿ ನಡೆಸದೇ ವಂಚಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ರಾಜರಾಜೇಶ್ವರಿ ನಗರದ ಗುತ್ತಿಗೆದಾರರು ಬಿಬಿಎಂಪಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿ ಮುಖ್ಯ ಆಯುಕ್ತರು ಉನ್ನತ ಮಟ್ಟದ ತನಿಖೆಗೆ ಸಮಿತಿ ರಚನೆ ಮಾಡಿ ಆದೇಶ ನೀಡಿದ್ದಾರೆ.
ಖಡಕ್ ಅಧಿಕಾರಿ ಎನಿಸಿಕೊಂಡರುವ ಹಿರಿಯ ಐಎಎಸ್ ಅಧಿಕಾರಿ ಮನಿಷ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿರುವ ಮನಿಷ್ ಮೌದ್ಗಿಲ್ ಆರ್ ಆರ್ ನಗರದಲ್ಲಿ ಇತ್ತೀಚೆಗೆ ಮಂಜೂರಾದ ಕಾಮಗಾರಿಗಳ ಕಡತ ತರಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಮನಿಷ್ ಮೌದ್ಗಿಲ್ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದ್ದು, ಒಂದು ವೇಳೆ ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗುವುದು ಖಚಿತ ಎಂದು ಹೇಳಲಾಗಿದೆ.