ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದೇ ಮೊದಲ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ್ದು, ಪೂರ್ಣ ಬಹುಮತ ಪಡೆಯಲು ವಿಫಲವಾಗಿದೆ. ಅದರಲ್ಲೂ ಸಚಿವ ಸ್ಥಾನ ಅಲಂಕರಿಸಿದ್ದ ಡಜನ್ ಮುಖಂಡರ ಸೋಲು ಬಿಜೆಪಿಗೆ ಮರ್ಮಾಘಾತವಾಗಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಸಂಜೆ ಅಧಿಕೃತವಾಗಿ ಪ್ರಕಟಗೊಂಡಿದ್ದು, ರಾಹುಲ್ ಗಾಂಧಿ ಅವರನ್ನು ಅಮೇಥಿಯಲ್ಲಿ ಸೋಲಿಸಿ ಗಮನ ಸೆಳೆದಿದ್ದ ಸಚಿವೆ ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಭಗವಂತ್ ಖೂಬಾ, ಅಜಯ್ ಮಿಶ್ರಾ ಸೇರಿದಂತೆ ಸಚಿವ ಸ್ಥಾನ ಅಲಂಕರಿಸಿದ್ದ 12 ಬಿಜೆಪಿ ಮುಖಂಡರು ಸೋಲುಂಡಿದ್ದಾರೆ.
ಅದರಲ್ಲೂ ಹಿಂದಿ ಪ್ರಭಾವ ಇರುವ ಪ್ರದೇಶಗಳಲ್ಲೇ ಸಚಿವರ ಸೋಲು ಬಿಜೆಪಿಗೆ ಜೀರ್ಣಿಸಿಕೊಳ‍್ಳಲಾಗುತ್ತಿಲ್ಲ. ಈ ಸಚಿವರು ಗೆದ್ದಿದ್ದರೆ ಬಿಜೆಪಿ ಬಹುತಮಕ್ಕೆ ಮತ್ತಷ್ಟು ಹತ್ತಿರವಾಗುತ್ತಿತ್ತು. ಇದರಿಂದ ಸರ್ಕಾರ ರಚನೆಗೆ ಬೇರೆ ಪಕ್ಷಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ಸಿಲುಕಿದೆ.
ಸ್ಮೃತಿ ಇರಾನಿ ಅಮೇಥಿಯಲ್ಲಿ ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರಾಗಿದ್ದ ಕಿಶೋರಿ ಲಾಲ್ ಶರ್ಮ ವಿರುದ್ಧ 1,67,196 ಮತಗಳಿಂದ ಸೋಲುಂಡಿದ್ದಾರೆ. ಇದರಿಂದ ಕೈ ತಪ್ಪಿದ್ದ ಅಮೇಥಿ ಮತ್ತೆ ಕಾಂಗ್ರೆಸ್ ವಶಪಡಿಸಿಕೊಂಡಿದೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಥೇನಿ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ವಿರುದ್ಧ 34,329 ಮತಗಳಿಂದ ಸೋಲುಂಡಿದ್ದಾರೆ. ಲಖಿಂಪುರಿಯಲ್ಲಿ ಪುತ್ರ ಕಾರು ಹರಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಲ್ವರನ್ನು ಕೊಂದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.
ಕೇಂದ್ರ ಸಚಿವ ಭಗವಂತ್ ಖೂಬಾ ಬೀದರ್ ನಲ್ಲಿ ಕಾಂಗ್ರೆಸ್ ನ 25 ವರ್ಷದ ಸಾಗರ್ ಖಂಡ್ರೆ ವಿರುದ್ಧ 1.28 ಲಕ್ಷ ಮತಗಳಿಂದ ಸೋಲುಂಡಿದ್ದಾರೆ.
ಕೇಂದ್ರ ಆದಿವಾಸಿ ಅಭಿವೃದ್ಧಿ ಸಚಿವ ಅರ್ಜುನ್ ಮುಂಡಾ ಜಾರ್ಖಂಡ್ ನ ಕುಂತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕಾಲಿಚರಣ್ ಮುಂಡಾ ವಿರುದ್ಧ 1,49,675 ಮತಗಳಿಂದ ಸೋಲುಂಡಿದ್ದಾರೆ.
ಕೃಷಿ ಖಾತೆ ರಾಜ್ಯ ಸಚಿವ ಕೈಲಾಷ್ ಚೌಧರಿ ರಾಜಸ್ಥಾನದ ಬಾರ್ಮರ್ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಗೆಲುವು ಕಂಡ ಕಾಂಗ್ರೆಸ್ ನ ಉಮ್ಮೆಡಾ ರಾಮ್ ಬೆನಿವಾಲ್ ಗಿಂತ 4.48 ಲಕ್ಷ ಮತಗಳಿಂದ ಹಿಂದೆ ಬಿದ್ದಿದ್ದಾರೆ.
ರಾಜ್ಯಸಭೆಯಿಂದ ಇದೇ ಮೊದಲ ಬಾರಿಗೆ ಕೇರಳದ ತಿರುವನಂತಪುರಂನಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಕಾಂಗ್ರೆಸ್ ನ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋಲುಂಡಿದ್ದಾರೆ.
ಬೃಹತ್ ಕೈಗಾರಿಕಾ ಸಚಿವ ಮಹೇಂದ್ರ ನಾಥ್ ಪಾಂಡೆ ಉತ್ತರ ಪ್ರದೇಶದ ಚಂಡೂಲಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಬಿರೇಂದ್ರ ಸಿಂಗ್ ವಿರುದ್ಧ 21 ಸಾವಿರ ಮತಗಳಿಂದ ಸೋಲುಂಡಿದ್ದಾರೆ.
ವಸತಿ ಸಚಿವ ಕುಶಾಲ್ ಕಿಶೋರ್ ಮೋಹನ್ ಲಾಲ್ ಘಂಜ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಆರ್ ಕೆ ಚೌಧರಿ ವಿರುದ್ಧ 70,292 ಮತಗಳಿಂದ ಸೋಲುಂಡಿದ್ದಾರೆ.
ಆಹಾರ ಖಾತೆ ಸಚಿವೆ ಸಾಧ್ವಿ ನಿರಂಜನ್ ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸೋಲುಂಡರೆ, ರೈಲ್ವೆ ಸಚಿವ ರಾವ್ ಸಾಹೇಬ್ ಧಾನ್ವೆ ಮಹಾರಾಷ್ಟ್ರದ ಜಲ್ನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕಲ್ಯಾಣ್ ವೈಜನಾಥ್ ರಾವ್ ವಿರುದ್ಧ ಆಘಾತ ಅನುಭವಿಸಿದರು.
ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಿದ್ದ ಬಿಹಾರದ ಆರ್ಹಾದಲ್ಲಿ ಸಿಪಿಐನ ಸುಧಾಮಾ ಪ್ರಸಾದ್ ವಿರುದ್ಧ ಆಘಾತ ಅನುಭವಿಸಿದರೆ, ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮುಜಾಫರ್ ನಗರದಲ್ಲಿ ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ವಿರುದ್ಧ 24 ಸಾವಿರ ಮತಗಳಿಂದ ಸೋಲುಂಡರು.
ರಾಜ್ಯ ಖಾತೆ ಸಂಸದೀಯ ಸಚಿವ ಹಾಗೂ ವಿದೇಶಾಂಗ ಸಚಿವ ವಿ. ಮುರುಗೇಶನ್ ಕೇರಳದ ತಿರುವನಂತಪುರದಲ್ಲಿ, ಮೀನುಗಾರಿಕೆ ಸಚಿವ ಎಲ್. ಮುರುಗನ್, ತಮಿಳುನಾಡಿನ ನೀಲಗಿರಿ ಕ್ಷೇತ್ರದಿಂದ ಡಿಎಂಕೆಯ ಎ.ರಾಜಾ ವಿರುದ್ಧ 2,40,585 ಮತಗಳಿಂದ ಹೀನಾಯ ಸೋಲುಂಡರು.
ಪಶ್ಚಿಮ ಬಂಗಾಳದ ಕೂಚ್ ಬಿಹಾರ ಕ್ಷೇತ್ರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತೀಶ್ ಪ್ರಮಾಣಿಕ್ 30 ಸಾವಿರ ಮತಗಳಿಂದ ಟಿಎಂಸಿಯ ಜಗದೀಶ್ ಚಂದ್ರ ಬಸುನಿಯಾ ವಿರುದ್ಧ ಸೋಲುಂಡಿದ್ದಾರೆ. ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಪಶ‍್ಚಿಮ ಬಂಗಾಳದ ಬಂಕುರಾ ಕ್ಷೇತ್ರದಲ್ಲಿ 32,778 ಮತಗಳಿಂದ ಟಿಎಂಸಿಯ ಅರೂಪ್ ಚಕ್ರವರ್ತಿ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದಾರೆ.