ವೇಗವಾಗಿ ಬಸ್ ಓಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಸ್ಕ್ರೂಡ್ರೈವರ್ ತೋರಿಸಿ ಇರಿಯುವುದಾಗಿ ಬಿಎಂಟಿಸಿ ಚಾಲಕನಿಗೆ ಬೆದರಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇತ್ತೀಚೆಗೆ ಪುಟ್ ಬೋರ್ಡ್ ಮೇಲೆ ನಿಲ್ಲಬೇಡ ಅಂತ ಹೇಳಿದ್ದಕ್ಕೆ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬ ಬಸ್ ಕಂಡಕ್ಟರ್ ಗೆ ಚಾಕು ಇರಿದಿದ್ದೂ ಅಲ್ಲದೇ ಬಸ್ ಗಾಜುಗಳನ್ನು ಪುಡಿ ಮಾಡಿ ಪುಂಡಾಟ ಮೆರೆದ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಇತ್ತೀಚೆಗೆ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವರಿಗೆ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಸೆಪ್ಟೆಂಬರ್ 8ನೇ ತಾರೀಕು ಘಟಕ 25 ರ ಅತ್ತಿಬೆಲೆ ಟು ಮೆಜೆಸ್ಟಿಕ್ ಹೋಗುತ್ತಿದ್ದ ವೋಲ್ವೋ ಬಸ್ಸಿನಲ್ಲಿ ಸಂಭವಿಸಿದ್ದು, ಈ ಘಟನೆಯು ಪ್ರಯಾಣಿಕರು ಮತ್ತು ಚಾಲಕರ ಮಾತಿನಚಕಮಕಿ ಘಟನೆಯಾಗಿದೆ ಎಂದು ಬಿಎಂಟಿಸಿ ಹೇಳಿಕೆ ಬಿಡುಗಡೆಮಾಡಿದೆ.
ಸಿಕ್ಕಾಪಟ್ಟೆ ಟ್ರಾಫಿಕ್ ಇದ್ದುದ್ದರಿಂದ ಚಾಲಕ ಬಸ್ ನ್ನು ನಿಧಾನವಾಗಿ ಚಾಲನೆ ಮಾಡುತ್ತಿದ್ದ. ಇದರಿಂದ ಕೆಂಡಾಮಂಡಲವಾದ ಪ್ರಯಾಣಿಕ ಮೊದಲು ಅವಾಚ್ಯವಾಗಿ ನಿಂದಿಸಿದ್ದಾನೆ. ಅದಕ್ಕೆ ಚಾಲಕ ಪ್ರತಿಕ್ರಿಯೆ ನೀಡದೇ ಇದ್ದಾಗ ತನ್ನ ಬಳಿ ಇದ್ದ ಸ್ಕ್ರ್ಯೂ ಡ್ರೈವರ್ ತೆಗೆದು ಬಸ್ ನ್ನು ಸ್ಪೀಡಾಗಿ ಓಡಿಸು, ಇಲ್ಲದಿದ್ರೆ ಸ್ಕ್ರ್ಯೂ ಡ್ರೈವರ್ ನಿಂದ ಚುಚ್ಚುಬಿಡ್ತೀನಿ ಎಂದು ಹೆದರಿಸಿದ್ದಾನೆ.
ತಕ್ಷಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಬಸ್ ನಿಂದ ಕೆಳಕ್ಕಿಳಿಸಿ ಓಡಿಸಿದ್ದಾರೆ.