ರಾಜಧಾನಿ ಮತ್ತು ನೋಯ್ಡಾದ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಈ-ಮೇಲ್ ಸಂದೇಶದ ಬೆದರಿಕೆ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ದೆಹಲಿಯಲ್ಲಿ ಸುಮಾರು 100 ಹಾಗೂ ನೋಯ್ಡಾದ 2 ಶಾಲೆಗಳಿಗೆ ಈ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರು ಸೇರಿದಂತೆ ಭಾರೀ ಪ್ರಮಾಣದಲ್ಲಿ ಪೋಷಕರನ್ನು ಸ್ಥಳಾಂತರಿಸಲಾಯಿತು.
ಈ-ಮೇಲ್ ರಷ್ಯಾದಿಂದ ಬಂದಿದೆ ಎಂದು ಶಂಕಿಸಲಾಗಿದ್ದು, ಹುಸಿ ಬಾಂಬ್ ಬೆದರಿಕೆ ಕರೆಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆ ನೀಡಿದೆ.
ದೆಹಲಿ ಹಾಗೂ ನೋಯ್ಡಾದ ಶಾಲೆಗಳಿಗೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆಯಾಗಿದೆ. ಜನರು ಆತಂಕ ಪಡಬೇಕಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.