ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ವೇಳೆ ಬಾಲಭದ್ರ ದೇವರ ಮೂರ್ತಿ ಜನರ ಮೇಲೆ ಬಿದ್ದಿದ್ದರಿಂದ 9 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಮಂಗಳವಾರ ಸಂಭವಿಸಿದೆ.
ಮಂಗಳವಾರ ರಥದಿಂದ ಬಾಲಭದ್ರ ದೇವರ ಮೂರ್ತಿಯನ್ನು ಭಕ್ತರು ಕೆಳಗೆ ಇಳಿಸುವಾಗ ಮೂರ್ತಿ ಕೆಳಗೆ ಬಿದ್ದಿದೆ. ಇದರಿಂದ ಮೂರ್ತಿ ಹೊತ್ತಿದ್ದ ಹತ್ತಾರು ಮಂದಿಯ ಮೇಲೆ ಬಿದ್ದು ಅವರು ಗಾಯಗೊಂಡಿದ್ದಾರೆ.
ಗಾಯಗೊಂಡ 9 ಮಂದಿಯಲ್ಲಿ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪುರಿ ಕಲೆಕ್ಟರ್ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.
ಅತ್ಯಂತ ಭಾರವಾದ ಮರದಿಂದ ನಿರ್ಮಿಸಲಾದ ಬಾಲಭದ್ರ ದೇವರ ಮೂರ್ತಿಯನ್ನು ರಥದಿಂದ ಕೆಳಗೆ ಇಳಿಸಿ ಗುಂಡಿಚ ದೇವಸ್ಥಾನದ ಗರ್ಭಗುಡಿಯೊಳಗೆ ತೆಗೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಪಹಡಿ ಸಂಸ್ಕೃತಿಯಂತೆ ಮೂರ್ತಿಯನ್ನು ರಥದಿಂದ ಕೆಳಗೆ ಇಳಿಸಿ ದೇವಸ್ಥಾನದ ಸ್ವಯಂ ಸೇವಕರು ಎತ್ತಿಕೊಂಡು ಬರುವಾಗ ಮೆಟ್ಟಿಲ ಬಳಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಮೂರ್ತಿ ಮೈಮೇಲೆ ಬಿದ್ದಿದ್ದರಿಂದ ಎಲ್ಲರೂ ಕೆಳಗೆ ಬಿದ್ದಿದ್ದಾರೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಹಜಿ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರಿಗೆ ಸೂಚಿಸಿದ್ದಾರೆ.
ಪುರಿ ಜಗನ್ನಾಥ ದೇವಸ್ಥಾನ ಕಾನೂನು ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಲಾರ್ಡ್ ಜಗನ್ನಾಥ, ದೇವಿ ಸುಭದ್ರಾ ಮತ್ತು ಬಾಲಭದ್ರ ಮೂರು ಮೂರ್ತಿಗಳಿಗೆ ಒಂದೇ ಬಾರಿ ರಥೋತ್ಸವ ನಡೆಯುತ್ತದೆ. ರಥೋತ್ಸವದ ನಂತರ ಮೂರ್ತಿಗಳನ್ನು ಗುಚ್ಚಿ ಗುಡಿಯೊಳಗೆ ಇರಿಸಲಾಗುತ್ತದೆ.