ಶ್ರೀಲಂಕಾದಲ್ಲಿ ಕುಟುಂಬ ಆಡಳಿತ ಮಟ್ಟಹಾಕುವ ಭರವಸೆ ನೀಡಿದ್ದ ನೂತನ ರಾಷ್ಟ್ರಪತಿ ಅನುರಾ ಕುಮಾರ ದಿಸ್ಸಾನಾಯಕೆ ಸಂಸತ್ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ಎಡಪಕ್ಷದ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಕುಟುಂಬ ರಾಜಕೀಯ ತೆರೆ ಎಳೆಯುವ ಉದ್ದೇಶದಿಂದ ಸಂಸತ್ ಅನ್ನು ವಿಸರ್ಜಿಸಿದ್ದು, ಒಂದು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.
ಮಂಗಳವಾರ ಹೊರಡಿಸಿದ ಆದೇಶದಲ್ಲಿ ಮಧ್ಯರಾತ್ರಿಯಿಂದಲೇ ಸಂಸತ್ ವಿಸರ್ಜಿಸಲಾಗಿದ್ದು, ನವೆಂಬರ್ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.
2020 ಆಗಸ್ಟ್ ನಲ್ಲಿ ಚುನಾವಣೆ ನಡೆದಿದ್ದು, 2024ಕ್ಕೆ ಅವಧಿ ಪೂರ್ಣಗೊಳ್ಳುತ್ತಿತ್ತು. ಆದರೆ ರಾಷ್ಟ್ರಪತಿ ತೀರ್ಮಾನದಿಂದ ಅವಧಿಗೂ 8 ತಿಂಗಳ ಮುನ್ನವೇ ಚುನಾವಣೆ ನಡೆಯಲಿದೆ.
2020ರಲ್ಲಿ ಆರ್ಥಿಕ ದುಸ್ಥಿತಿಯಿಂದ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹಿಂಸಾಚಾರಕ್ಕೂ ಇಳಿದಿದ್ದರು.
ರಾಷ್ಟ್ರಪತಿ ಆಗಿ ಆಯ್ಕೆಯಾದ ಬೆನ್ನಲ್ಲೇ ವಂಶಪಾರಂಪರ್ಯ ರಾಜಕೀಯಕ್ಕೆ ತೆರೆ ಎಳೆಯಬೇಕು ಮತ್ತು ರಾಜಕೀಯ ಶುದ್ಧೀಕರಣ ಮಾಡಬೇಕು. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ದೇಶ ಅಭಿವೃದ್ಧಿಪಡಿಸಬೇಕು ಎಂದು 55 ವರ್ಷದ ದಿಸ್ಸಾನಾಯಕೆ ಹೇಳಿಕೆ ನೀಡಿದ್ದರು.