ಸುಮಾರು 3000 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆ ಆರಂಭವಾದ ಬೆನ್ನಲ್ಲೇ ಇದೀಗ ತಂದೆ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ಸಂಬಂಧಿ ಆಗಿದ್ದರೂ ಮನೆ ಕೆಲಸ ಮಾಡುತ್ತಿದ್ದ ವೇಳೆ ಎಚ್.ಡಿ. ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಸಂತ್ರಸ್ತೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಎಫ್ಐಆರ್ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.
354 A, 354 D, 509 ಅಡಿ ಪ್ರಕರಣ ದಾಖಲಾಗಿದೆ. 2015 ರಲ್ಲಿ ಹೆಚ್.ಡಿ.ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ. ತಂದೆ ಮತ್ತು ಮಗನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಹೆಚ್.ಡಿ.ರೇವಣ್ಣ ಅವರು ನನಗೆ ಹಾಸ್ಟೆಲ್ವೊಂದರಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2013 ರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಗಾಗ್ಗೆ ಮನೆಗೆ ಬರುವಂತೆ ಹೇಳುತ್ತಿದ್ದರು. ಭವಾನಿ ರೇವಣ್ಣ ನನ್ನ ಸೋದರತ್ತೆ ಮಗಳು ಎಂದು ತಿಳಿಸಿದ್ದಾರೆ.
2015 ರಲ್ಲಿ ರೇವಣ್ಣರ ಮಾತಿನಂತೆ ಹಾಸ್ಟೆಲ್ ಕೆಲಸಕ್ಕೆ ಸೇರಿಕೊಂಡಿದ್ದೆ. ಅದಾದ ನಾಲ್ಕು ವರ್ಷಗಳ ನಂತರ ಅವರ ಮೊದಲನೇ ಪುತ್ರ ಸೂರಜ್ ರೇವಣ್ಣ ಮದುವೆ ಸಮಯದಲ್ಲಿ ಮನೆಯ ಕೆಲಸ ಮಾಡುವಂತೆ ಕರೆಸಿಕೊಂಡಿದ್ದರು. ಅಲ್ಲಿ ಮೂರೂವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದೆ. ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳ ನಂತರ ರೇವಣ್ಣ ಅವರು ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು.
ಮನೆಯಲ್ಲಿ 6 ಜನ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರೂ ಪ್ರಜ್ವಲ್ ರೇವಣ್ಣ ಅವರು ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗರು ಸಹ ನನಗೆ ಮತ್ತು ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳಿಗೆ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಿದ್ದರು.
ಭವಾನಿ ಅವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ರೇವಣ್ಣ ಅವರು ಸ್ಟೋರ್ ರೂಮ್ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು.