ಪ್ಯಾರಿಸ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ 29 ಪದಕ ಗೆದ್ದು ಇತಿಹಾಸ ಬರೆದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಬಹುಮಾನ ಮೊತ್ತ ಘೋಷಿಸಿದೆ.
ಕೇಂದ್ರ ಕ್ರೀಡಾ ಸಚಿವ ಮನುಷ್ಕ್ ಮಾಂಡಿವ್ಯಾ ಮಂಗಳವಾರ ಬಹುಮಾನ ಮೊತ್ತವನ್ನು ಪ್ರಕಟಿಸಿದ್ದು, ಮುಂಬರುವ 2028ರ ಅಮೆರಿಕದ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತರಿಗೆ ತಲಾ 75 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ ತಲಾ 30 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 30 ಲಕ್ಷ ರೂ. ಹಾಗೂ ಡಬಲ್ಸ್ ವಿಭಾಗದಲ್ಲಿ ವಿಜೇತರಿಗೆ ತಲಾ 22.5 ಲಕ್ಷ ರೂ. ಬಹುಮಾನ ಮೊತ್ತ ಘೋಷಿಸಲಾಗಿದೆ.
2016ರಲ್ಲಿ 4 ಪದಕ ಗೆದ್ದಿದ್ದ ಭಾರತ ಇದೀಗ 29 ಪದಕ ಗೆಲ್ಲುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಎಂಬುದು ವಿಶೇಷ ಎಂದು ಸಚಿವರು ಹೇಳಿದರು.
ಭಾರತ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕ ಸೇರಿದಂತೆ 29 ಪದಕಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ಬರೆದಿತ್ತು. ಮೂರು ವರ್ಷಗಳ ಹಿಂದೆ ನಡೆದ ಟೊಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ 19 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆಯಾಗಿತ್ತು. ಇದೇ ವೇಳೆ ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ ಒಟ್ಟಾರೆ ಗೆದ್ದ ಪದಕಗಳ ಸಂಖ್ಯೆ 50 ದಾಟಿದೆ.