ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪತಿ ಪೊಲೀಸರಿಗೆ ಶರಣಾಗಿರುವ ಭೀಕರ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶ ಮೂಲದ ದಂಪತಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಗಂಗರಾಜು ಪತ್ನಿ ಭಾಗ್ಯಮ್ಮ, ಪುತ್ರಿಯರಾದ ನವ್ಯಾ (19), ಹೇಮಾವತಿ (22) ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಜಾಲಹಳ್ಳಿ ಕ್ರಾಸ್ ಬಳಿಯ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಪತಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೀಣ್ಯ ಪೊಲೀಸರು ದೌಡಾಯಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪತ್ನಿಯ ಶೀಲದ ಬಗ್ಗೆ ಅನುಮಾನ ಪಡುತ್ತಿದ್ದ ಗಂಗರಾಜು ಬುಧವಾರ ಬೆಳಗ್ಗೆ ಎಲ್ಲರನ್ನೂ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬೀಸಾಡಿದ್ದಾನೆ. ಇನ್ನು ಕೊಲೆ ಮಾಡಿದ ನಂತರ ತಾನೇ ಸ್ವತಃ ಪೊಲೀಸ್ ಠಾಣೆಗೆ ತೆರಳಿ, ಪತ್ನಿ ಶೀಲದ ಮೇಲೆ ಅನುಮಾನ ಇತ್ತು.ಇದರಿಂದ ಆಕ್ರೋಶಗೊಂಡು, ಮಚ್ಚಿನಿಂದ ಕೊಲೆ ಮಾಡಿದ್ದೇನೆ ಎಂದು ಮಚ್ಚಿನ ಸಮೇತವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕೊಲೆ ಆರೋಪಿ ಗಂಗರಾಜು ಹೆಬ್ಬಗೋಡಿ ಪೊಲೀಸ್ ಠಾಣೆ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಹೋಮ್‌ಗಾರ್ಡ್ ವಿಭಾಗದಲ್ಲಿ ಈತನಿಗೆ ಸಂಚಾರ ನಿರ್ವಹಣೆಯ ಕೆಲಸ ಕೊಡಲಾಗಿತ್ತು.
ಕೆಲಸದ ನಿಮಿತ್ತ ಗಂಗರಾಜು ಠಾಣೆಗೆ ಹೋದಾಗ ಪತ್ನಿ ಭಾಗ್ಯಮ್ಮ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಡನೆ ಸೇರುತ್ತಿದ್ದಳು. ಈ ವಿಚಾರ ಮಗಳು ಹಾಗೂ ಮನೆಯಲ್ಲಿದ್ದ ಅಕ್ಕನ ಮಗಳಿಗೆ ಗೊತ್ತಿದ್ದರೂ ತನಗೆ ತಿಳಿಸಿಲ್ಲವೆಂದು ಕೋಪಗೊಂಡು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೀಣ್ಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಶರಣಾದ ಗಂಗರಾಜು ನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.