ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆಯ ಕೈಕಾಲು ಕಟ್ಟಿ ಕುಕ್ಕರ್ ನಿಂದ ಹಲ್ಲೆ ನಡೆಸಿ ಚಾಕು ಮತ್ತು ಕತ್ತರಿಯಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಐಟಿ ಹಬ್ ಸೈಬರಾಬಾದ್ ನಲ್ಲಿ ಸ್ವಾನ್ ಲೇಕ್ ಅಪಾರ್ಟ್ ಮೆಂಟ್ ನ 13ನೇ ಮಹಡಿಯ ಮನೆಯಲ್ಲಿ ಗಂಡ ಹಾಗೂ ಮಗನೊಂದಿಗೆ ವಾಸವಾಗಿದ್ದ 50 ವರ್ಷದ ರೇಣು ಅಗರ್ ವಾಲ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು 40 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು ದೋಚಿದ್ದಾರೆ.
ರೇಣು ಅಗರ್ ವಾಲ್ ಅವರನ್ನು ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹತ್ಯೆ ಮಾಡಿದ ದುಷ್ಕರ್ಮಿಗಳು ಮನೆಯಲ್ಲಿಯೇ ಸ್ನಾನ ಮಾಡಿ ರಕ್ತದ ಕಲೆಯ ಬಟ್ಟೆಗಳನ್ನು ಬದಲಿಸಿ ಪರಾರಿಯಾಗಿದ್ದಾರೆ. ಕೊಲೆ ಮಾಡಿದವರು ಕೆಲಸಗಾರರು ಎಂದು ಶಂಕಿಸಲಾಗಿದ್ದು, ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ.
ಅಂಗಡಿಗೆ ಹೋಗಿದ್ದ ತಂದೆ ಹಾಗೂ 26 ವರ್ಷದ ಮಗ ಸಂಜೆ 5 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಜಾರ್ಖಂಡ್ ಮೂಲದ ಇಬ್ಬರು ಮನೆಕೆಲಸಗಾರರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಸಿಸಿಟಿವಿಯಲ್ಲಿ ಇವರಿಬ್ಬರು ಮನೆಯಿಂದ ಹೊರಗೆ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಒಬ್ಬ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದರೆ ಮತ್ತೊಬ್ಬ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದ.
ಪತಿ ಹಾಗೂ ಮಗ ಮನೆಗೆ ಬಂದಾಗ ಮನೆಗೆ ಬೀಗ ಹಾಕಲಾಗಿದ್ದು, ಪ್ಲಂಬರ್ ಕರೆಸಿ ಕಿಟಕಿ ಹೊಡೆದು ಒಳಗೆ ಪ್ರವೇಶಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದ ನಂತರ ಮಹಿಳೆಗೆ ಕುಕ್ಕರ್ ನಿಂದ ಹಲ್ಲೆ ನಡೆಸಿದ ನಂತರ ಚಾಕು ಹಾಗೂ ಕತ್ತರಿಯಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


