ತವರು ಮನೆಗೆ ಹೋಗಿದ್ದಕ್ಕೆ ಮಗನ ಮುಂದೆಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಪತಿ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಮೈಸೂರಿನ ಎಚ್.ಡಿ. ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ ಕೋಟೆಯ ಹನುಮಂತ ನಗರದ ನಿವಾಸಿ ಮಲ್ಲೇಶ್ ನಾಯ್ಕ್ ಈ ಕೃತ್ಯ ಎಸಗಿದ್ದು, ಪತ್ನಿ ಮಧುರಾ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ವಿಜಯನಗರದ ಕೂಡ್ಲಗಿ ತಾಲೂಕಿನ ಬಿಬಿ ತಾಂಡ ಮೂಲದ ಮಲ್ಲೇಶ್ ನಾಯ್ಕ್ ಕಳೆದ 8 ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಮಧುರಾರನ್ನು ಮದುವೆ ಆಗಿದ್ದರು.
ಹೆಚ್.ಡಿ ಕೋಟೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಲ್ಲೇಶ್ ನಾಯ್ಕ್ ಕೆಲವು ವರ್ಷಗಳಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುವ ಜೊತೆಗೆ ಅನುಮಾನದಿಂದ ನೋಡುತ್ತಿದ್ದ.
ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ. ಇದರ ನಡುವೆ ತವರು ಮನೆಗೆ ಕೆಲವು ದಿನಗಳ ಕಾಲ ಹೋಗಿದ್ದ ಮಧುರಾ ಮೇಲೆ ಮಲ್ಲೇಶ್ ಆಕ್ರೋಶಗೊಂಡಿದ್ದ.
ಇದೇ ವಿಚಾರದಲ್ಲಿ ಜಗಳ ತೆಗೆದ ಮಲ್ಲೇಶ್, ಮಗನ ಮುಂದೆಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿರುವ ಮಧುರಾಳನ್ನು ನೆರೆ ಮನೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.