ನಲವತ್ತು ವರ್ಷ ಕಳೆದರೂ ಮದುವೆ ಮಾಡಿಸಿಲ್ಲ ಎಂದು ಪಾಪಿ ಮಗ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಸ್ಥಳೀಯ ನಿವಾಸಿ ಗಂಗಮ್ಮ (65) ಅವರನ್ನು ಪುತ್ರ ಉಮಾಶಂಕರ್ (40) ಕೊಲೆ ಮಾಡಿದ್ದಾನೆ.
ಕಳೆದ 1 ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸಾಗುವಾಗ ನಡೆದ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ಆರೋಪಿ ಉಮಾಶಂಕರ್ ಬುದ್ದಿ ಭ್ರಮಣೆಯಾದವನಂತೆ ವರ್ತಿಸುತ್ತಿದ್ದ. ಪದೇ ಪದೇ ಮದುವೆ ಮಾಡಿಸುವಂತೆ ತಾಯಿ ಜೊತೆ ಜಗಳವಾಡುತ್ತಿದ್ದ.
ಕಳೆದ ಮಾರ್ಚ್ 26 ರಂದು ಕೂಡ ತಾಯಿ ಗಂಗಮ್ಮರೊಂದಿಗೆ ಮದುವೆ ವಿಚಾರಕ್ಕೆ ಜಗಳ ತೆಗೆದಿದ್ದರಿಂದ ಆಕ್ರೋಶಗೊಂಡು ಮೊದಲು ಕೈನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆಕೆ ಕುಸಿದು ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಐಸಿಯುಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಶ್ರವಣಬೆಳಗೊಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಉಮಾ ಶಂಕರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


