ದಿನಾ ಬೆಳಗಿನ ತಿಂಡಿ ಏನು ಮಾಡಲಿ ಎಂದು ಯೋಚಿಸುತ್ತಿದ್ದರೆ ಹಲಸಿನ ಹಣ್ಣಿಂದ ಮಾಡಬಹುದಾದ ತಿಂಡಿಗಳ ಬಗ್ಗೆಯೂ ಒಮ್ಮೆ ಗಮನ ಹರಿಸಿ. ಅದರಲ್ಲೂ ಹಲಸಿನ ಕಡುಬು ತುಂಬಾ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು: ಬೆಳ್ತಿಗೆ ಅಕ್ಕಿ 1 ಕಪ್, ಕುಚ್ಚಲಕ್ಕಿ ಒಂದು ಕಪ್ (ಕುಚ್ಚಲಕ್ಕಿ ಇಲ್ಲದಿದ್ದರೆ ಬೆಳ್ತಿಗೆ ಎರಡು ಕಪ್), ಹಲಸಿನ ಹಣ್ಣಿನ ತೊಳೆ 6 ಕಪ್, ಬೆಲ್ಲ ಬೇಕಿದ್ದರೆ ರುಚಿಗೆ ತಕ್ಕಷ್ಟು, ಏಲಕ್ಕಿ ನಾಲ್ಕು, ಕಾಳುಮೆಣಸು 10, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ, ಬಾಳೆ ಎಲೆ,
ಅಕ್ಕಿಯನ್ನು ತೊಳೆದು 6 ಗಂಟೆಗಳ ನನೆಸಿಡಿ, ನೀರನ್ನು ಬಸಿದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿ ತೆಗೆದಿಡಿ. ಹಲಸಿನ ಹಣ್ಣಿನ ತೊಳೆ ಬಿಡಿಸಿ ಮಿಕ್ಸಿಯಲ್ಲಿ ಒಂದೆರಡು ಸುತ್ತು ರುಬ್ಬಿಕೊಳ್ಳಿ.
ಎರಡನ್ನೂ ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಸಿಹಿ ಇನ್ನಷ್ಟು ಬೇಕಿದ್ದರೆ ನಿಮಗೆ ಬೇಕಾದಷ್ಟು ಬೆಲ್ಲ ಹೆಚ್ಚಿಕೊಂಡು ಹಿಟ್ಟಿಗೆ ಸೇರಿಸಿ, ಜೊತೆಗೆ ಏಲಕ್ಕಿ ಪುಡಿ, ಕರಿಮೆಣಸು ಹಾಕಿ. ತೆಂಗಿನ ಕಾಯಿತುರಿಯನ್ನು ಸೇರಿಸಿ ಒಟ್ಟಾಗಿ ಎಲ್ಲವನ್ನು ಮಿಕ್ಸ್ ಮಾಡಿ.
ನೀರು ಹಾಕಿರುವ ಇಡ್ಲಿ ಪಾತ್ರೆಯಲ್ಲಿ ಇಡಲು ಸಾಧ್ಯವಿರುವಷ್ಟು ದೊಡ್ಡದಾಗಿರುವ ಬಾಳೆ ಎಲೆಯನ್ನು ಹರಿಯದಂತೆ ಜಾಗರೂಕತೆಯಿಂದ ಇಡ್ಲಿ ಪಾತ್ರೆಯಲ್ಲಿ ಹರಡಿ. ಇಡ್ಲಿ ಪಾತ್ರೆಯನ್ನು ಸ್ಟವ್ ಮೇಲಿಟ್ಟು ನೀರು ಕುದಿಯಲಾರಂಭಿಸುವಾಗ ಸ್ವಲ್ಪ ಬಾಡುವ ಬಾಲೆ ಎಲೆಗೆ ಒಂದೆರಡು ಚಮಚ ತುಪ್ಪ ಸವರಿ, ತುಪ್ಪ ಸವರುವಾಗ ಜಾಗ್ರತೆ ಅಗತ್ಯ , ಏಕೆಂದರೆ ಕೈಗೆ ಬಿಸಿ ತಾಗುವ ಅಪಾಯ ಜಾಸ್ತಿ.
ಹಿಟ್ಟಿನ ಮಿಶ್ರಣವನ್ನು ಬಾಳೆ ಎಲೆ ಮೇಲೆ ಸುರಿದು ನೀಟಾಗಿ ಸವರಿ ಹಿಟ್ಟಿನ ಮೇಲೆ ಮತ್ತೊಂದು ಬಾಳೆ ಎಲೆಯನ್ನು ಪೂರ್ತಿಯಾಗಿ ಮುಚ್ಚಿಟ್ಟು ಮುಕ್ಕಾಲು ಗಂಟೆ ಬೇಯಿಸಿ. ಬಿಸಿ ಇರುವಾಗ ತುಪ್ಪ ಹಾಕಿ ತಿನ್ನಲು ರುಚಿಯಾಗಿರುತ್ತದೆ. ಇಷ್ಟಪಡುವವರು ಶುಂಠಿ ಮತ್ತು ತೆಂಗಿನಕಾಯಿ ಸೇರಿಸಿ ಚಟ್ನಿ ಮಾಡಿ ಒಗ್ಗರಣೆ ಹಾಕಿ ಅದರ ಜೊತೆಗೆ ತಿನ್ನುವುದಕ್ಕೂ ಸೂಪರ್.