ನಾವು ಎರಡು ಪಕ್ಷಗಳನ್ನು ಒಡೆದು ಅಧಿಕಾರಕ್ಕೆ ಬಂದೆವು ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎರಡು ಪಕ್ಷಗಳನ್ನು ಒಡೆದು ಅಧಿಕಾರಕ್ಕೆ ಬಂದೆವು. ಅದೇ ರೀತಿ ಇಬ್ಬರು ಸ್ನೇಹಿತರನ್ನು ಜೊತೆಗೂಡಿಸಿದ್ದೇವೆ ಎಂದರು.
2019ರ ವಿಧಾನಸಭಾ ಚುನಾವಣೆಯಲ್ಲಿ ನಾನು ಮರಳಿ ಬರುತ್ತೇನೆ ಎಂಬ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ನಾನು ಮರಳಿ ಬರುತ್ತೇನೆ ಎಂದು ವೈಯಕ್ತಿಕವಾಗಿ ಹೇಳಲಿಲ್ಲ. ಮಹಾರಾಷ್ಟ್ರವನ್ನು ಬದಲಿಸಲು ನಾನು ಬರುತ್ತೇನೆ ಎಂಬರ್ಥದಲ್ಲಿ ಹೇಳಿದ್ದೆ ಎಂದು ಅವರು ಸಮರ್ಥಿಸಿಕೊಂಡರು.
ಚುನಾವಣೆ ನಡೆದು ಸುಮಾರು ಎರಡೂವರೆ ವರ್ಷಗಳ ನಂತರ ನಾನು ಮತ್ತೆ ಅಧಿಕಾರಕ್ಕೆ ಬಂದಿದ್ದೇನೆ. ಆದರೆ ಈ ಬಾರಿ ಎರಡು ಪಕ್ಷಗಳನ್ನು ಒಡೆದು ಅಧಿಕಾರಕ್ಕೆ ಬರಬೇಕಾಯಿತು. ಅಲ್ಲದೇ ಇಬ್ಬರು ಸ್ನೇಹಿತರನ್ನು ಜೊತೆಗೆ ಕರೆ ತಂದಿದ್ದೇನೆ ಎಂದು ಪರೋಕ್ಷವಾಗಿ ಶಿವಸೇನೆ ಮತ್ತು ಎನ್ ಸಿಪಿ ಪಕ್ಷಗಳನ್ನು ಒಡೆದಿರುವ ಬಗ್ಗೆ ಪ್ರಸ್ತಾಪಿಸಿದರು.