ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ದ್ವಿಪಾತ್ರ ನಿಭಾಯಿಸಿ ನಿವೃತ್ತಿ ಘೋಷಿಸಿದ್ದ ದಿನೇಶ್ ಕಾರ್ತಿಕ್ ಗೆ ಈಗ ಡಬಲ್ ಹುದ್ದೆ ನೀಡಲಾಗಿದೆ.
ಐಪಿಎಲ್ ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ನಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಗೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದೆ.
ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಸತತ 6 ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿತ್ತು. 15 ಪಂದ್ಯಗಳಲ್ಲಿ ಕಾರ್ತಿಕ್ 2 ಅರ್ಧಶತಕ ಸೇರಿದಂತೆ 36.22ರ ಸರಾಸರಿಯಲ್ಲಿ 326 ರನ್ ಗಳಿಸಿದ್ದರು. ಅಲ್ಲದೇ ಹಲವು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ ಗೆಲ್ಲಿಸಿದ್ದರು.
ಇತ್ತೀಚೆಗಷ್ಟೇ 39ನೇ ಜನ್ಮದಿನ ಆಚರಿಸಿಕೊಂಡ ದಿನೇಶ್ ಕಾರ್ತಿಕ್, ನಿವೃತ್ತಿ ಘೋಷಣೆ ನಂತರ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಆರ್ ಸಿಬಿ ತಂಡದಲ್ಲಿ ಹೊಸ ಸವಾಲುಗಳನ್ನು ಪಡೆಯಲು ಉತ್ಸುಕನಾಗಿದ್ದೇನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಕ್ಸ್ ನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕ ಮಾಡಿರುವ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಅಲ್ಲದೇ ನೀವು ಕ್ರಿಕೆಟ್ ನಿಂದ ದೂರ ಸರಿದಿರಬಹುದು. ಆದರೆ ಕ್ರಿಕೆಟ್ ನಿಮ್ಮನ್ನು ದೂರ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.