ಉಡುಪಿ (ಕುಂದಾಪುರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಯೋಧರು ಪ್ರಯಾಣ ಮಾಡುತ್ತಿದ್ದ ವಾಹನವೊಂದು ರಸ್ತೆಯಿಂದ ಕಣಿವೆಗೆ ಉರುಳಿ ಬಿದ್ದು ಮೃತಪಟ್ಟ, ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ (33) ಅವರ ಪಾರ್ಥಿವ ಶರೀರ ಗುರುವಾರ ಹುಟ್ಟೂರು ಬೀಜಾಡಿ ಬಂದಿದೆ. ಸಾವಿರಾರೂ ಸಂಖ್ಯೆ ಜನರು ಅಂತಿಮ ದರ್ಶನ ಪಡೆದುಕೊಂಡರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದ ಪಾರ್ಥಿವ ಶರೀರವನ್ನು ಅಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಸೇರಿದಂತೆ ಹಲವರು ಪಾರ್ಥಿವ ಶರೀರ ಹಸ್ತಾಂತರ ಮಾಡುವಾಗ ಹಾಜರಿದ್ದರು. ಬಳಿಕ ಮೃತದೇಹವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ತರಲಾಯಿತು. ಬೆಳಿಗ್ಗೆ ಗಾಜಿನ ಕಿಟಕಿ ಇರುವ ಅಂಬುಲೆನ್ಸ್ ವಾಹನಕ್ಕೆ ಪುಷ್ಪಾಲಂಕಾರ ಮಾಡಿ ಉಡುಪಿಯಿಂದ ಮೆರವಣಿಗೆ ಹೊರಟಿತು.
ಪಾರ್ಥಿವ ಶರೀರ ಸಾಗಿ ಬರುವ ಮಾರ್ಗದ ನಡುವೆ ಬ್ರಹ್ಮಾವರ, ಸಾಸ್ತಾನ ಟೋಲ್ ಗೇಟ್, ಅನೂಪ್ ಕಲಿತ ಕೋಟ ವಿವೇಕ ಶಾಲೆ ಎದುರು, ಕೋಟ ಅಮೃತೇಶ್ವರಿ ದೇವಸ್ಥಾನದ ಎದುರು ಜಮಾಯಿಸಿದ್ದ ಜನರು ‘ಅನೂಪ್ ಅಮರ್ ರಹೇ’, ಭಾರತ ಮಾತಾಕಿ ಜೈಕಾರ ಕೂಗುತ್ತಾ ಪುಷ್ಪಾರ್ಚನೆ ಮಾಡಿ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೆರದಿದ್ದ ಜನರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ತೆಕ್ಕಟ್ಟೆಯಿಂದ ಕೋಟೇಶ್ವರ ಮಾರ್ಗವಾಗಿ ವಾಹನ ಜಾಥಾ ಮೂಲಕವಾಗಿ ಸಾಗಿ ಬೀಜಾಡಿ ನಿವಾಸಕ್ಕೆ ಬಂದು ತಲುಪಿತು.
ಮೃತದೇಹ ಮನೆಗೆ ಬರುತ್ತಿದ್ದಂತೆ ಮೃತ ಅನೂಪ್ ಅವರ ತಾಯಿ, ಪತ್ನಿ, ಸಹೋದರಿಯರು ಸೇರಿದಂತೆ ಕುಟುಂಬದ ಸದಸ್ಯರು ಕಣ್ಣೀರು ಹಾಕಿದರು. ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು.
ಮೃತ ಅನೂಪ್ ಅವರ ಮನೆಯ ಸಮೀಪದಲ್ಲಿಯೇ ಇರುವ ಶಾಲೆಗೆ ಮೃತದೇಹ ಕೊಂಡೊಯ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. 3 ಗಂಟೆಗೂ ಅಧಿಕ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ನಮನ ಅಂತಿಮ ನಮನ ಸಲ್ಲಿಸಿದರು.
ಮನೆ ಸಮೀಪದ ಸಮುದ್ರ ತೀರದ ಜಾಗದಲ್ಲಿ ಅಂತಿಮ ನಮನ ಸಲ್ಲಿಸಿ ಸೇನೆಯ ಗೌರವವಂದನೆ ನೀಡಿ, ಸೇನೆಯ ಅಧಿಕಾರಿಗಳು ಅನೂಪ್ ಪೂಜಾರಿ ಅವರ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಸಕಲ ವಿಧಿ ವಿಧಾನಗಳು ನಡೆದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.