ಗದಗ ಜಿಲ್ಲೆಯ ಐತಿಹಾಸಿಕ ಪಾರಂಪರಿಕ ಲಕ್ಕುಂಡಿಯು ವಿವಿಧ ಶಿಲ್ಪಕಲೆ, ವಾಸ್ತುಶಿಲ್ಪ ಹೊಂದಿರುವ ದೇವಾಲಯಗಳನ್ನು ಒಳಗೊಂಡಿದ್ದು ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ತನ್ನದೇ ಆದ ಛಾಪು ಮೂಡಿಸಿದೆ.
2025 ಜನವರಿ 26ರಂದು ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮಜಿನಾಲಯದ ಸ್ತಬ್ಧಚಿತ್ರವು ಆಯ್ಕೆಯಾಗಿದೆ.
ಲಕ್ಕುಂಡಿಯ ಶಿಲ್ಪಕಲಾ ವೈಭವವನ್ನು ಮತ್ತೆ ನೆನಪಿಸುತ್ತದೆ. ಲಕ್ಕುಂಡಿ ದೇವಾಲಯಗಳ ಶಿಲ್ಪಕಲೆಯು ಅಭೂತಪೂರ್ವ ಇತಿಹಾಸವನ್ನು ಹೊಂದಿದ್ದು ಕಲಾಸಕ್ತರಿಗೆ ಕಣ್ಮನ ಸೆಳೆಯುತ್ತದೆ.
ಬ್ರಹ್ಮ ಜಿನಾಲಯ ದೇವಾಲಯ ಪರಿಚಯ
ಬ್ರಹ್ಮಜಿನಾಲಯ ದೇವಾಲಯ ಕ್ರಿ.ಶ 11 ನೇ ಶತಮಾನದ್ದಾಗಿದ್ದು, ಪೂರ್ವಾಭಿಮೂಖವಾಗಿ ಗರ್ಭಗುಡಿ,ಅಂತರಾಳ, ಗೂಢಮಂಟಪ, ಅಗ್ರಮಂಟಪ , ತಲವಿನ್ಯಾಸ ಹೊಂದಿರುವ,ಕಪ್ಪುಪಶಿಲೆ ಹೊಂದಿದೆ.
ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕರಣೆಯಿದ್ದು, ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ. ತೀರ್ಥಂಕರನನ್ನು ಈಗ ಸದ್ಯದಲ್ಲಿ ನೇಮಿನಾಥ ಎಂದು ಕರೆಯುತ್ತಿದ್ದಾರೆ. ವಿತಾನವು ಸಮತಲವಾಗಿದೆ. ದ್ವಾರಬಂಧವು ಪಂಚಶಾಖಾ ರೀತಿಯದಾಗಿದ್ದು. ಅವು ಕ್ರಮವಾಗಿ ಇಂತಿವೆ:ರತ್ನಶಾಖಾ,ರೂಪಶಾಖ,ಸ್ತಂಭಶಾಖಾ, ಸಿಂಹಶಾಖಾ ಮತ್ತು ಪತ್ರಶಾಖಾ, ಲಲಾಟಪಟ್ಟಿಕೆಯಲ್ಲಿ ತೀರ್ಥಂಕರನ ಉಬ್ಬುಶಿಲ್ಪವಿದೆ. ಹಂಸಗಳ ಸಾಲು ಇದೆ. ಪೇದ್ಯಾ ಭಾಗದಲ್ಲಿ ಗಂಗಾ, ರತಿ ಕಾಮ ಹಾಗೂ ದ್ವಾರಪಾಲರ ಶಿಲ್ಪಗಳಿವೆ. ಉತ್ತರಾಂಗದ ಮೇಲೆ ಪದ್ಮಾವತಿಯಕ್ಷಿಯ ಉಬ್ಬುಶಿಲ್ಪವಿದೆ.
ಅಂತರಾಳ:
ಗರ್ಭ ಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು ಮೂಲೆಗಳಲ್ಲಿ ಅರ್ಧಗಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ. ವಿತಾನವು ಸಮತಲವಾಗಿದೆ.
ಗೂಢಮಂಟಪ:
ಅಂತರಾಳಕ್ಕೆ, ಹೊಂದಿಕೊಂಡಂತೆ ಗೂಢಮಂಟಪವಿದೆ. ಮಧ್ಯದಲ್ಲಿ ನಾಲ್ಕು ಸ್ವತಂತ್ರ ಶ್ರೀಕಾರ ಸ್ತಬ್ಧಗಳಿದ್ದು ಪೀಠ, ಓಮ, ಕಾಂಡ ಮಾಲಾಸ್ಥಾನ, ಕುಂಭ, ಕಲಶ, ಫಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಇಕ್ಕೆಲದಲ್ಲಿ ಚತುರ್ಮುಖ ಬ್ರಹ್ಮ, ಮತ್ತು ಪದ್ಯಾವತಿಯಕ್ಷಿಯ ಶಿಲ್ಪಗಳಿವೆ. ಸಮತಲ ವಿತಾನದ ಮದ್ಯದಲ್ಲಿ ಉಬ್ಬು ಅಲಂಕಾರವಿದೆ. ಸ್ತಂಭಗಳ ಪೀಠ ಭಾಗದಲ್ಲಿ ದರ್ಪಣ ಸುಂದರಿ, ನರ್ತಕಿ, ತಾಯಿ ಮತ್ತು ಮಗು ಕೊಳಲು ನುಡಿಸುವ ಸ್ತ್ರೀಯ ಉಬ್ಬು ಶಿಲ್ಪಗಳನ್ನು ಕಂಡರಿಸಲಾಗಿದೆ. ದ್ವಾರಬಂಧವು ಪಂಚಶಾಖಾ ರೀತಿಯದಾಗಿದ್ದು, ಅವು ಕ್ರಮವಾಗಿ ಇಂತಿವೆ: ರತ್ನಶಾಖಾ, ರೂಪಶಾಜಾ, ಸಂಭಶಾಖಾ, ಸಿಂಹಶಾಖಾಖಾ ಮತ್ತು ಪತ್ರಶಾಖ, ಲಲಾಟ ಚಿಟ್ಟಿಕೆಯಲ್ಲಿ, ಗಜಲಕ್ಷ್ಮಿಮಯ ಉಬ್ಬು ಶಿಲ್ಪವಿದೆ ಉತ್ತರಾಂಗದಲ್ಲಿ ಹಂಸಗಳ ಸಾಲು ಇದೆ ಪೇದ್ಯಾಭಾಗದಲ್ಲಿ ಆರೋಕ್ಷ ಗಂಗಾ ರತಿ ಕಾಮ ಧರಣೇಂದ್ರ ಹಾಗು ದ್ವಾರ ಪಾಲರ ಶಿಲ್ಪಗಳಿವೆ. ದ್ವಾರ ಬಂಧದ ಉದುಂಬರಕ್ಕೆ ಹೊಂದಿಕೊಂಡು ಮುಂದುಗಡೆ ಪದ್ಮಾಲಂಕಾರದ ಚಂದ್ರಶಿಲಾ ರಚನೆಯಿದೆ.
ಅಗ್ರಮಂಟಪ:
ಗೂಡಮಂಟಪಕ್ಕೆ ಹೊಂದಿಕೊಂಡು ಅಗ್ರಮಂಟಪವಿದೆ. ಇಲ್ಲಿ ಒಟ್ಟು 28 ಸ್ತಂಭಗಳಿವೆ. ಅಗ್ರಮಂಟಪದ ಸುತ್ತಲೂ ಕಕ್ಷಾಸನವಿದು. ಕಕ್ಷಾಸನದ ಮೇಲ್ಭಾಗದಲ್ಲಿ ಇಳಿಜಾರದ ಚಜ್ಜುದಾಗ ಇದೆ.
ಕಕ್ಷಾಸನದ ಸುತ್ತಲೂ ಚಿಕ್ಕ ಚಿಕ್ಕ ಭದ್ರಕ ರೀತಿಯ ಸ್ತಂಭಗಳಿವೆ. ಮಧ್ಯದಲ್ಲಿರುವ ನಾಲ್ಕು, ಶ್ರೀಕರ ಸ್ತಂಭಗಳು , ಪೀಠ, ಓಮ ಕಾಂಡ ಮಾಲಾಸ್ನಾನ, ಕಲಶ,ಫಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಅಗ್ರ ಮಂಟಪವನ್ನು ಪ್ರವೇಶಿಸಲು ಸೋಪಾನಗಳಿದ್ದು ಪಕ್ಕದಲ್ಲಿ ಯಾಳಿ ರೀತಿಯ ಹಸ್ತಿಹಸ್ತವಿದೆ.
ಬಾಹ್ಯ,ವಾಸ್ತು ವಿವರ:
ಅಧಿಷ್ಠಾನ : ಈ ಬಸದಿಯ ಕಪೋತ ಬಂಧ, ಅಧಿಸ್ಠಾನವನ್ನು ಹೊಂದಿದ್ದು ಅದಕ್ಕೆ ಕ್ರಮವಾಗಿ ಖುರಕ ಪದ್ಮ ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ,ಮತ್ತು ಮಕರ ಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀರ್ತಿಮುಖಗಳ ಅಲಂಕಾರವಿದೆ ಹಾಗೂ ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ.
ಭಿತ್ತಿ: ಭಿತ್ತಿಯು ಕುಡ ಸ್ತಂಭ ಪಂಜರ ಮತ್ತು ಕೋಷ್ಠ ಪಂಜರಗಳನ್ನು ಹೊಂದಿದೆ. ಸಲಿಲಾಂತರಗಳಲ್ಲಿ ಸ್ತಂಭ ಪಂಜರಗಳಿದ್ದು ಅವುಗಳ ಮೇಲೆ ದ್ರಾವಿಡ ಮಾದರಿಯ ಶಿಖರದ ಪ್ರತಿಕೃತಿಗಳಿವೆ. ಅದರ ಮೇಲೆ ಮಕರತೋರಣವಿದೆ. ಕೂಟ (ಮೂಲೆ) ದಲ್ಲಿ ಕೋಷ್ಠ ಪಂಜರಗಳಿದ್ದು ಅವುಗಳ ಮೇಲೆ ದ್ರಾವಿಡ ಶಿಖರದ ಪ್ರತಿಕೃತಿಗಳಿವೆ. ಭಿತ್ತಿಯ ಮೇಲ್ಭಾಗದಲ್ಲಿ ಕಪೋತವಿದ್ದು ಅದರ ಮೇಲೆ ನಾಸಿಗಳ ಅಲಂಕಾರವಿದೆ.
ಶಿಖರ
ಗರ್ಭಗೃಹದ ಮೇಲಿನ ಶಿಖರವು ಚತುಸ್ಕಲ (ನಾಲ್ಕು, ದ್ರಾವಿಡ ಮಾದರಿಯದಾಗಿದೆ. ಮೊದಲನೆಯ ಮಹಡಿಯಲ್ಲಿ ಹಾರವು ಕೂಟ, ಪಂಜರ ಶಾಲಾಗಳಿಂದ ಕೂಡಿದೆ ಕಪೋತದ ಮೇಲೆ ವೇದಿಕಾ ಇದೆ. ಕೂಟ ಮತ್ತು ಪಂಜರಗಳಲ್ಲಿ ಕೀತಿ ಮುಖಗಳ ಅಲಂಕಾರವಿದೆ. ಶಾಲಾದಲ್ಲಿ ಜಿನಬಿಂಬಗಳನ್ನು ಮತ್ತು ಶಿವ ಸೂರ್ಯನ ಶಿಲ್ಪಗಳನ್ನು ಕಂಡರಿಸಲಾಗಿದೆ. ಎರಡು ಮತ್ತು ಮೂರನೆಯ ಮಹಡಿಗಳಲ್ಲಿಯೂ ಇದೇ ರೀತಿಯ ಹಾರದ ಅಲಂಕಾರವಿದೆ ಅದರ ಮೇಲೆ ಕಪೋತವಿದೆ. ಮೇಲ್ಭಾಗದಲ್ಲಿ ಘಂಟಾ ಕಲಶವಿದೆ. ಶಿಖರದ ಮುಂಭಾಗದಲ್ಲಿಯ ಶುಕನಾಸಿಯು ಗವಾಕ್ಷದ ಆಲಂಕಾರದಿಂದ ಕೂಡಿದ್ದು ಮಧ್ಯದಲ್ಲಿ ಶಿಲ್ಪವಿಲ್ಲ ಅದರ ಮೇಲೆ ಕೀರ್ತಿ ಮುಖವಿದೆ.