ಬೆಂಗಳೂರು: ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕಾದರೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಸೂರ್ಯನಗರದ ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುರೇಶ್ ಅವರು ಮಾತನಾಡಿದರು.
ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ ಮೈದಾನ, ಹಾಕಿ ಕ್ರೀಡಾಂಗಣ ಹೊರತುಪಡಿಸಿ ನಮ್ಮ ನಗರದಲ್ಲಿ ಬೇರೆ ಕ್ರೀಡಾಂಗಣ ಕಟ್ಟಲು ಆಗಿಲ್ಲ. ಹೀಗಾಗಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಅರ್ಥ ಬಂದಿದೆ. ಈ ವಿಚಾರವಾಗಿ ಎಷ್ಟೇ ಟೀಕೆ ಬಂದರೂ ವಸಚಿ ಸಚಿವರು ಹಾಗೂ ಗೃಹಮಂಡಳಿ ಅಧ್ಯಕ್ಷರಾದ ಶಿವಲಿಂಗೇಗೌಡರು ಶಂಕುಸ್ಥಾಪನೆ ನೆರವೇರಿಸುವ ಹಂತಕ್ಕೆ ತಂದಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಪರವಾಗಿ ನಾನು ಅವರಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ಮಾಜಿ ಸಚಿವರಾದ ಸೋಮಣ್ಣ ಭೂಸ್ವಾಧೀನ ಪ್ರಕ್ರಿಯೆ ಮಾಡುವಾಗ ಇಲ್ಲಿ ಸುತ್ತಮುತ್ತಲು ಸಾಕಷ್ಟು ಕೈಗಾರಿಕಾ ಪ್ರದೇಶವಿದ್ದು, ಇಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೆ. ನಮ್ಮ ವಸತಿ ಸಚಿವರಾದ ಜಮೀರ್ ಅಹ್ಮದ್ ನನ್ನ ಮನವಿಯನ್ನು ಆಲಿಸಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಯುವಕರಿಗೆ ಪ್ರೋತ್ಸಾಹ ನೀಡಲು ನಾವು ಈ ತೀರ್ಮಾನ ಮಾಡಿದ್ದೇವೆ. ಇಲ್ಲಿ ಕೆಲವು ಮೂಲಭೂತ ಸೌಕರ್ಯ ಕೊರತೆ ಇದೆ. ಅದನ್ನು ಸರಿಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದೇ ಭಾಗದಲ್ಲಿ 6 ಪಥದ ಎಸ್ ಟಿಆರ್ ಆರ್ ರಸ್ತೆ ಬರುತ್ತಿದ್ದು, 1 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಇಲ್ಲಿಂದ 4 ಕಿ.ಮೀ. ದೂರದಲ್ಲಿ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸಾಧಿಸಬಹುದಾಗಿದೆ ಎಂದು ವಿವರಿಸಿದರು.



