Tuesday, July 21, 2026
Google search engine
Homeಕ್ರೀಡೆFifa World Cup ವಿಶ್ವಕಪ್‌ ಗೆದ್ದ ಸ್ಪೇನ್‌ ಪಡೆದ ಬಹುಮಾನ ಎಷ್ಟು ಗೊತ್ತಾ?

Fifa World Cup ವಿಶ್ವಕಪ್‌ ಗೆದ್ದ ಸ್ಪೇನ್‌ ಪಡೆದ ಬಹುಮಾನ ಎಷ್ಟು ಗೊತ್ತಾ?

ಸ್ಪೇನ್‌ ಎಂಬ ಯುವ ಗೂಳಿಯ ಮುಂದೆ ಚಾಂಪಿಯನ್‌ ಅರ್ಜೇಂಟೀನಾದ ಆಟ ನಡೆಯಲಿಲ್ಲ. ಮೆಸ್ಸಿ ಮ್ಯಾನಿಕ್‌ ಅನ್ನು ಮೆಟ್ಟಿ ನಿಂತ ಸ್ಟಾರ್‌ ಆಟಗಾರರೇ ಇಲ್ಲದ ಸ್ಪೇನ್‌ 2026ರ ಫಿಫಾ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚಾಂಪಿಯನ್‌ ಇರಲಿ ವಿಶ್ವಕಪ್‌ ನಲ್ಲಿ 8ನೇ ಸ್ಥಾನ ಪಡೆದ ತಂಡವೇ 182 ಕೋಟಿ ರೂ. ಗಳಿಸಿದೆ. ಇದು ನಮ್ಮ ಐಪಿಎಲ್‌ ನಲ್ಲಿ ಚಾಂಪಿಯನ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತಕ್ಕಿಂತ 900 ಪಟ್ಟು ಹೆಚ್ಚು ಅಂದರೆ ವಿಶ್ವಕಪ್‌ ಟೂರ್ನಿಯ ತಾಕತ್ತು ಏನು ಎಂಬುದನ್ನು ಊಹಿಸಬಹುದು. ಚಾಂಪಿಯನ್ನರಿಗೆ ಒಲಿದ ಬಹುಮಾನ ಮೊತ್ತವೆಷ್ಟು? ಈ ಬಾರಿಯ ಟೂರ್ನಿಯ ವಿಶೇಷತೆಗಳೇನು ಎಂಬ ಕುತೂಹಲಕಾರಿ ವಿಷಯಗಳ ಬಗ್ಗೆ ಒಮ್ಮೆ ಕಾಣ್ಣೋಡಿಸೋಣ ಬನ್ನಿ..

ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದ ಜಂಟಿ ಆತಿಥ್ಯದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಫುಟ್ಬಾಲ್‌ ಹಬ್ಬವನ್ನು ಇಡೀ ಜಗತ್ತು ಸಂಭ್ರಮದಿಂದ ಆಚರಿಸಿತು. ಭಾನುವಾರ ತಡರಾತ್ರಿ ನಡೆದ ಫೈನಲ್‌ ನಲ್ಲಿ ಸ್ಪೇನ್‌ ಗೆಲ್ಲುತ್ತಿದ್ದಂತೆ ಇಷ್ಟು ಬೇಗ ವಿಶ್ವಕಪ್‌ ಸಮರ ಮುಗಿದು ಹೋಯಿತೇ ಎಂಬಷ್ಟು ಕುತೂಹಲವನ್ನು ಟೂರ್ನಿ ಕಾಯ್ದುಕೊಂಡಿತು. ಚಿಕ್ಕಪುಟ್ಟ ತಂಡಗಳು ಕೂಡ ಬಲಿಷ್ಠ ತಂಡಗಳ ಬೆವರಿಳಿಸಿತು. ಸ್ಟಾರ್‌ ಆಟಗಾರರು ಕೂಡ ಗೋಲು ಗಳಿಸಲು ಪರದಾಡುವಂತೆ ಆಯಿತು. ರೆಫರಿಗಳ ವಿವಾದಾತ್ಮಕ ತೀರ್ಪುಗಳು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಯಿತು. ಆದರೂ ಎಲ್ಲೂ ಪಂದ್ಯಗಳ ಮೇಲಿನ ಅಭಿಮಾನಿಗಳ ಚಿತ್ತ ಮಾತ್ರ ಕದಡಲೇ ಇಲ್ಲ! ಆ ರೀತಿಯ ರೋಚಕತೆಯನ್ನು ಈ ಬಾರಿ ವಿಶ್ವಕಪ್‌ ಪಂದ್ಯಗಳು ನಡೆದವು ಎಂದರೆ ಅತಿಶಯೋಕ್ತಿ ಏನಲ್ಲ.

ಹೌದು ಈ ಬಾರಿ ವಿಶ್ವಕಪ್‌ ನಲ್ಲಿ ಕೊನೆಯ ಬಾರಿ ಆಡಿದ ವಿಶ್ವದ ಸ್ಟಾರ್‌ ಆಟಗಾರರಾದ ಕ್ರಿಸ್ಚಿಯಾನೊ ರೊನಾಲ್ಡೊ, ಲಿಯೊನೆಲ್‌ ಮೆಸ್ಸಿ, ಕೈಲಿಯಾನ್‌ ಮೆಬೆಪೆ ಸೇರಿ ಹಲವು ಆಟಗಾರರ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿತ್ತು. ಆದರೆ ಸ್ಟಾರ್‌ ಆಟಗಾರರೇ ಇಲ್ಲದ ಯುವ ಆಟಗಾರರನ್ನೇ ಹೊಂದಿದ್ದ ಸ್ಪೇನ್‌ ತಂಡ 1-0 ಗೋಲಿನಿಂದ ಹಾಲಿ ಚಾಂಪಿಯನ್‌ ಎನಿಸಿಕೊಂಡಿದ್ದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವನ್ನು ಜಿದ್ದಾಜಿದ್ದಿನ ಕಾಳಗದಲ್ಲಿ ಸೋಲಿಸಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿಕೊಳ್ಳುವ ಮೂಲಕ ವಿಶ್ವದ ನಂ.1 ತಂಡ ಎಂಬುದನ್ನು ನಿರೂಪಿಸಿತು.

ಇಡೀ ಪಂದ್ಯದಲ್ಲಿ ಮೆಸ್ಸಿ ಬಳಗ ಗೋಲು ಗಳಿಸುವುದಿರಲಿ ಸ್ಪೇನ್‌ ತಂಡದ ಭದ್ರಕೋಟೆಯನ್ನು ಭೇದಿಸಲು ಪ್ರಯಾಸ ಪಡಬೇಕಾಯಿತು. ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಸ್ಪೇನ್‌ ಪದೇಪದೇ ಅರ್ಜೆಂಟೀನಾ ತಂಡದ ರಕ್ಷಣೆಯನ್ನು ಭೇದಿಸಿ ಗೋಲು ಗಳಿಸಲು ಪ್ರಯತ್ನಿಸಿತಾದರೂ ಅರ್ಜೆಂಟೀನಾದ ಗೋಲ್‌ ಕೀಪರ್‌ ಬಂಡೆಯಂತೆ ಅಡ್ಡ ನಿಂತಿದ್ದರು. ಅರ್ಜೆಂಟೀನಾ ತಂಡ ಇಡೀ ಪಂದ್ಯದಲ್ಲಿ ಒಂದೆರಡು ಬಾರಿ ಮಾತ್ರ ಸ್ಪೇನ್‌ ರಕ್ಷಣೆಯನ್ನು ಭೇದಿಸುವ ಪ್ರಯತ್ನ ಮಾಡಿದರೂ ಗೋಲು ಗಳಿಸಲಿಲ್ಲ. ಆದರೆ ಸ್ಪೇನ್‌ ಸುಮಾರು ೨೦ ಬಾರಿ ಅರ್ಜೆಂಟೀನಾದ ಕೋಟೆಯನ್ನು ದಾಟಿದರೂ ಗೋಲು ದಾಖಲಿಸಲು ಆಗಲಿಲ್ಲ.

ಆಟ ಕೈ ತಪ್ಪುತ್ತಿರುವುದು ಮನವರಿಕೆ ಆಗುತ್ತಿದ್ದಂತೆ ರೊಚ್ಚಿಗೆದ್ದ ಅರ್ಜೆಂಟೀನಾ ಆಟಗಾರರು ಒರಟು ಆಟಕ್ಕೆ ಮುಂದಾಗಿದ್ದರಿಂದ ರೆಫರಿ ಎರಡು ಹಳದಿ ಕಾರ್ಡ್‌ ನೀಡಿದ್ದರಿಂದ ಒಬ್ಬ ಆಟಗಾರರನ್ನು ಕಳೆದುಕೊಂಡು 10 ಆಟಗಾರರೊಂದಿಗೆ ಆಟ ಮುಂದುವರಿಸಬೇಕಾಯಿತು. ಇದೇ ಸಮಯದಲ್ಲಿ ಹೆಚ್ಚುವರಿ ಆಟದ ವೇಳೆ ಬದಲಿ ಆಟಗಾರನಾಗಿ ೧೦೫ನೇ ನಿಮಿಷಕ್ಕೆ ಮೈದಾನದಕ್ಕೆ ಇಳಿದ ಫೆರಾನ್‌ ಟೊರಸ್‌ ಗೋಲು ಬಾರಿಸಿ ಸ್ಪೇನ್‌ ಗೆ ಪ್ರಶಸ್ತಿ ಖಚಿತಪಡಿಸಿದರು. ಈ ಮೂಲಕ ಸ್ಪೇನ್‌ ಎರಡನೇ ಬಾರಿ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದರೆ, ಮೆಸ್ಸಿ ಪಡೆಗೆ ನಿರಾಸೆ ಉಂಟಾಯಿತು. ಸ್ಪೇನ್‌ ಟೂರ್ನಿಯಲ್ಲಿ ಆಡಿದ 38 ಪಂದ್ಯಗಳಲ್ಲೂ ಸೋಲೇ ಕಾಣದೇ ಅಜೇಯರಾಗಿ ವಿಶ್ವಕಪ್‌ ಗೆ ಮುತ್ತಿಟ್ಟಿತು. ಮತ್ತೊಂದು ವಿಶೇಷ ಅಂದರೆ ಪುರುಷರ ಮತ್ತು ಮಹಿಳೆಯರ ವಿಶ್ವಕಪ್ ಟ್ರೋಫಿ ಗೆದ್ದ ದಾಖಲೆ ಬರೆದಿದೆ.

ವಿಶ್ವ ಚಾಂಪಿಯನ್‌ ಎನಿಸಿಕೊಳ್ಳುವುದು ದೊಡ್ಡ ಸಾಧನೆಯೇ ಸರಿ. ಆದರೆ ಇದರ ಜೊತೆ ಬಂದ ಬಹುಮಾನ ಮೊತ್ತವೂ ಸಣ್ಣದೆನಲ್ಲ. ವಿಶ್ವದ ಶ್ರೀಮಂತ ಕ್ರಿಕೆಟ್‌ ಎಂದು ಕರೆಯಲಾಗುವ ಐಪಿಎಲ್‌ ನ ಬಹುಮಾನ ಮೊತ್ತ ೨೦ ಕೋಟಿ ಆದರೆ ಈ ಬಾರಿ ಚಾಂಪಿಯನ್‌ ಆದ ಸ್ಪೇನ್‌ ಗಳಿಸಿದ್ದು 50 ಮಿಲಿಯನ್‌ ಡಾಲರ್‌ ಅಂದರೆ ಸುಮಾರು 482 ಕೋಟಿ ರೂಪಾಯಿಗಳು! ಈ ಮೂಲಕ ಕ್ರೀಡಾ ಜಗತ್ತಿನ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನ ಮೊತ್ತ ಗಳಿಸಿದ ಖ್ಯಾತಿಗೆ ಸ್ಪೇನ್‌ ಪಾತ್ರವಾಯಿತು.

ಈ ಬಾರಿ ವಿಶ್ವಕಪ್‌ ಟೂರ್ನಿಗೆ 7,280 ಕೋಟಿ ರೂ. ಮೀಸಲಿಡಲಾಗಿತ್ತು. ಇದರಲ್ಲಿ ತಂಡಗಳಿಗೆ ಪ್ರದರ್ಶನದ ಆಧಾರದ ಮೇಲೆ ಹಂಚಿಕೆ ಮಾಡಲು ನಿಗದಿ ಪಡಿಸಿದ್ದ ಮೊತ್ತ 5,469 ಕೋಟಿ ರೂಪಾಯಿ. ರನ್ನರ್‌ ಅಪ್‌ ಆದ ಅರ್ಜೆಂಟೀನಾ ತಂಡಕ್ಕೆ ೩೩ ಮಿಲಿಯನ್‌ ಡಾಲರ್‌ ಅಂದರೆ 317 ಕೋಟಿ ರೂ. ಗಳಿಸಿತು. ಫ್ರಾನ್ಸ್‌ ತಂಡವನ್ನು ೬-೪ ಗೋಲು ಗಳಿಂದ ಮಣಿಸಿ ಮೂರನೇ ಸ್ಥಾನ ಪಡೆದ ಇಂಗ್ಲೆಂಡ್‌ ೨೯ ಮಿಲಿಯನ್‌ ಡಾಲರ್‌ ಅಂದರೆ ೨೭೯ ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನಕ್ಕೆ ಕುಸಿದ ಫ್ರಾನ್ಸ್‌ 259 ಕೋಟಿ ರೂ. ಗಳಿಸಿತು. ಐದರಿಂದ ಎಂಟನೇ ಸ್ಥಾನ ಪಡೆಯುವ ಪ್ರತೀ ತಂಡವು $19 ಮಿಲಿಯನ್ ಅಂದರೆ ₹182 ಕೋಟಿ ಹಣವನ್ನು ಪಡೆಯಲಿವೆ.

ಅಷ್ಟಕ್ಕೂ ಸ್ಪೇನ್ ಚಾಂಪಿಯನ್ ಪಟ್ಟಕ್ಕೇರಲು ಇದೇ ಕಾರಣ:
ಸ್ಪೇನ್ ತಂಡವು ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಕಾರಣವಾಗಿದ್ದು ಅವರ ರಕ್ಷಣಾತ್ಮಕ ಪ್ರದರ್ಶನ. ಸ್ಪೇನ್ ತಂಡವು ಇಡೀ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ೧ ಗೋಲು ಬಿಟ್ಟುಕೊಟ್ಟಿದೆ, ಇದು ಚಾಂಪಿಯನ್ ತಂಡವೊಂದು ಫಿಫಾ ವಿಶ್ವಕಪ್‌ನಲ್ಲಿ ಬಿಟ್ಟುಕೊಟ್ಟ ಅತಿ ಕಡಿಮೆ ಗೋಲುಗಳಾಗಿದೆ. ರಕ್ಷಣಾತ್ಮಕ ಆಟದ ಮೂಲಕ ಎದುರಾಳಿ ತಂಡದ ಆಟಗಾರರಿಗೆ ಗೋಲು ಗಳಿಸುವ ಅವಕಾಶವನ್ನೇ ಸ್ಪೇನ್ ಮಾಡಿಕೊಡಲಿಲ್ಲ. ಫೈನಲ್‌ನಲ್ಲೂ ಬಲಿಷ್ಠ ಅರ್ಜೆಂಟೀನಾ ತಂಡವು ಕೂಡ ಗೋಲು ಗಳಿಸಲು ವಿಫಲವಾಯಿತು. ಈ ಹಿಂದಿನ ವಿಶ್ವಕಪ್‌ಗಳಲ್ಲಿ ಫ್ರಾನ್ಸ್ (1998), ಇಟಲಿ (2006) ಮತ್ತು ಸ್ಪೇನ್ (2010) ತಂಡಗಳು ಜಂಟಿಯಾಗಿ ಹೊಂದಿದ್ದ ಅತಿ ಕಡಿಮೆ (2 ಗೋಲುಗಳು) ಗೋಲು ಬಿಟ್ಟುಕೊಟ್ಟ ದಾಖಲೆಯು ಈ ವಿಶ್ವಕಪ್‌ನಲ್ಲಿ ಮುರಿಯಿತು.

ಸ್ಪೇನ್‌ನ ಗೋಲ್‌ಕೀಪರ್ ಉನೈ ಸಿಮೋನ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಬಾರಿ ಒಂದೂ ಗೋಲು ಕೂಡ ಬಿಟ್ಟುಕೊಡದೆ ‘ಗೋಲ್ಡನ್ ಗೌವ್ಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ, ಸತತವಾಗಿ ಟೂರ್ನಿಯಲ್ಲಿ ಸತತವಾಗಿ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಗಳಿಸಲು ಬಿಡದೆ ಸಾರ್ವಕಾಲಿಕ ವಿಶ್ವಕಪ್ ದಾಖಲೆ ಬರೆದರು. ಈ ಮೂಲಕ 1990 ರಲ್ಲಿ ವಾಲ್ವರ್ ಝಂಗಾ ಬರೆದಿದ್ದ 517 ನಿಮಿಷಗಳ ದಾಖಲೆಯನ್ನು ಮುರಿದರು.

ಸ್ಪೇನ್ ಗೆಲುವಿನ ಹಿಂದೆ ನಾಯಕ ರೋಡ್ರಿ ಅವರ ‘ಕಾಲ್ಗಳಕ’ ಕೂಡ ಕೆಲಸ ಮಾಡಿದೆ. ಮಿಡ್‌ಫೀಲ್ಡರ್ ಆಗಿರುವ ರೋಡ್ರಿ, ಈ ಟೂರ್ನಿಯಲ್ಲಿ 650ಕ್ಕೂ ಅಧಿಕ ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 2022ರ ಕತಾರ್ ವಿಶ್ವಕಪ್‌ನಲ್ಲಿ ತಾವೇ ನಿರ್ಮಿಸಿದ್ದ 638 ಪಾಸ್‌ ಗಳ ದಾಖಲೆಯನ್ನು ಮುರಿದರು. ‘ಗೋಲ್ಡನ್‌ ಬಾಲ್’ ಪ್ರಶಸ್ತಿ ಗಿಟ್ಟಿಸಿಕೊಂಡರು.
ವಿಶ್ವಕಪ್‌ ನಲ್ಲಿ ಬಹುತೇಕ ತಂಡಗಳು ಸ್ಟಾರ್‌ ಆಟಗಾರರನ್ನು ಹೊಂದಿದ್ದು, ಈ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಸ್ಪೇನ್ ತಂಡವು ವಿಶ್ವಕಪ್ ಗೆಲ್ಲಲು ಡ್ಯಾನಿ ಓಲ್ನೋ ಮತ್ತು ಅಲೆಕ್ಸ್ ಬೇನಾ ಅವರಂತಹ ಯುವ ಆಟಗಾರರು ಮಿಡ್‌ಫೀಲ್ಡ್‌ನಲ್ಲಿ ಬಲ ತೋರಿಸಿದರೆ, 19 ವರ್ಷದ ಲ್ಯಾಮೈನ್ ಯಮಾಲ್ ಆಕ್ರಮಣಕಾರಿ ಆಟದಿಂದ ಪಂದ್ಯದ ದಿಕ್ಕು ಬದಲಿಸುತ್ತಾ ಬಂದರು. ಮತ್ತೊಬ್ಬ 19 ವರ್ಷದ ಆಟಗಾರ ಪೌ ಕುಬಾರ್ಸಿ ‘ಅತ್ಯುತ್ತಮ ಯುವ ಆಟಗಾರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇದೆಲ್ಲವನ್ನೂ ಗಮನಿಸಿದರೆ ಈ ಬಾರಿಯ ವಿಶ್ವಕಪ್‌ ನಲ್ಲಿ ಏನೇ ವಿವಾದ ಉಂಟಾದರೂ, ಏನೇ ಅಸಮಾಧಾನ ಉಂಟಾದರೂ ಅರ್ಹರ ಕೈಗೆ ವಿಶ್ವಕಪ್‌ ಹೋಯಿತು ಎಂಬುದು ಸಂತಸದ ವಿಷಯ. ಮತ್ತೊಂದೆಡೆ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಪ್ರಶಸ್ತಿಯ ಹೊಸ್ತಿಲವರೆಗೂ ತಂಡವನ್ನು ಮುನ್ನಡೆಸಿದ್ದು ಕಡಿಮೆ ಸಾಧನೆಯಲ್ಲ. ಆದರೆ ಇಂತಹ ಮಹಾನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದಿರಲಿ, ಟೂರ್ನಿಯಲ್ಲಿ ಯಾವಾಗ ಪಾಲ್ಗೊಳ್ಳುವ ಅರ್ಹತೆ ಪಡೆಯುತ್ತದೆ ಎಂಬುದೇ ದೊಡ್ಡ ಪ್ರಶ್ನೆ. ಅತ್ಯಂತ ಶ್ರೀಮಂತ ಕ್ರಿಕೆಟ್‌ ಎಂದು ಬೆನ್ನು ತಟ್ಟಿಕೊಳ್ಳುವ ಕ್ರಿಕೆಟ್‌ ಗಿಂತ ಸಾವಿರ ಪಾಲು ದೊಡ್ಡದಾಗಿರುವ ಕಾಲ್ಚೆಂಡು ಆಟದಲ್ಲೂ ಭಾರತ ಸಾಧನೆ ಮಾಡುವುದು ಕೂಡ ಕನಸಿನ ಮಾತೇ ಅಲ್ಲವೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments