ಶಿಶುಗಳು ಮತ್ತು ಗರ್ಭಿಣಿಯರಿಗೆ ಅತ್ಯುತ್ತಮವಾದ ಪೌಷ್ಟಿಕಾಂಶಗಳಿಂದ ಸಮೃದ್ದವಾದ ನಿಸರ್ಗದತ್ತ ಆಹಾರ ಅರಾರೂಟ್. ಕನ್ನಡದಲ್ಲಿ ಕೂವೆ ಎಂದು ಕರೆಯುವ ಈ ಬಿಳಿ ಬಣ್ಣದ ಗೆಡ್ಡೆಯ ವೈಜ್ಞಾನಿಕ ಹೆಸರು `ಮರಾಂಟ ಅರುಂಡಿನೇಸಿಯೆ’. ಇದರ ಮೂಲ ದಕ್ಷಿಣ ಅಮೆರಿಕ. ಫಿಲಿಫೈನ್ಸ್, ಕೆರೆಬಿಯನ್ ದ್ವೀಪ, ಅಮೆರಿಕ, ಭಾರತದಾದ್ಯಂತ ಬೆಳೆಯುತ್ತದೆ.
ಅರಿಶಿನದಂತೆ ಇದನ್ನು ಸುಲಭವಾಗಿ ಬೆಳೆಯಬಹುದು. ಗಿಡವು 3-5 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗೆಡ್ಡೆ ಬಲಿಯುವ ಹಂತ ಬಂದಾಗ ಸುಂದರವಾದ ಚಿಕ್ಕ ಬಿಳಿಯ ಹೂಗಳು ಕಾಣಿಸುತ್ತವೆ. ಬಳಿಕ ಎರಡು ತಿಂಗಳು ಕಳೆದರೆ ಗೆಡ್ಡೆ ಕೀಳಬಹುದು.
ಅಡಿಕೆ, ಕಾಫಿ ತೋಟಗಳಲ್ಲಿ ಅಥವಾ ಮನೆ ಮುಂದಿನ ಕೈತೋಟದಲ್ಲಿ ಒಂದೆರಡು ಸಾಲು ಮಾಡಿ ನೆಟ್ಟರೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಹೆಚ್ಚಿನ ನೀರು, ಗೊಬ್ಬರದ ಆರೈಕೆ ಇದಕ್ಕೆ ಬೇಕಾಗಿಲ್ಲ. ಬುಡಕ್ಕೆ ಸ್ವಲ್ಪ ಕೊಟ್ಟಿಗೆ ಗೊಬ್ಬರ ಕೊಟ್ಟರೆ ಗೆಡ್ಡೆಗಳು ಸಮೃದ್ಧವಾಗಿ ಬಿಡುತ್ತದೆ.
ಒಂದು ಗಿಡದಲ್ಲಿ ನಾಲ್ಕದಿಂದ ಐದು ಹಾಲು ಬಿಳುಪಿನ ಒಂದು ಅಡಿಗಿಂತಲೂ ಸ್ವಲ್ಪ ಉದ್ದವಾದ ಆಕರ್ಷಕ ಗೆಡ್ಡೆಗಳು. ತುದಿ ಬಾಣದಂತೆ ಚೂಪಾಗಿರುವುದರಿಂದ ಇಂಗ್ಲಿಷ್‍ನಲ್ಲಿ ಅರಾರೂಟ್ ಎಂದು ಹೆಸರು ಬಂದಿದೆ.
ನವೆಂಬರ್ ಡಿಸೆಂಬರ್ ಹೊತ್ತಿಗೆ ಗಿಡ ಒಣಗುತ್ತದೆ. ಜನವರಿಯಲ್ಲಿ ಗೆಡ್ಡೆ ಕಿತ್ತು ಉಪಯೋಗಿಸಬಹುದು. ಮಾರ್ಚ್ ಏಪ್ರಿಲ್‍ವರೆಗೂ ಕೀಳಬಹುದು. ಗೆಡ್ಡೆಯ ಜತೆಗೆ ಇರುವ ಚಿಕ್ಕ ಹೊಸ ಗಿಡಗಳು, ಗೆಡ್ಡೆಯ ತುದಿ ಭಾಗವನ್ನು ನಾಟಿಗೆ ಬಳಸಬಹುದು.
ಗೆಡ್ಡೆಗಳನ್ನು ಉಪಯೋಗಿಸುವುದು ಹೇಗೆ?
ಕಿತ್ತಂತಹ ಗೆಡ್ಡೆಗಳನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಮಿಕ್ಸಿ ಅಥವಾ ಕಲ್ಲಿನಲ್ಲಿ ನೀರು ಸೇರಿಸಿ ರುಬ್ಬಿ. ನೀರು ಹಾಕಿ ತೆಳುವಾದ ಬಟ್ಟೆಯಲ್ಲಿ ಸೋಸಬೇಕು. ಅಡಿಯಲ್ಲಿ ದೋಸೆ ಹಿಟ್ಟಿನಂತಹ ಹಿಟ್ಟು ತಯಾರಾಗುತ್ತದೆ. ಹಿಟ್ಟು ಸಂಗ್ರಹಿಸಿದ ಪಾತ್ರೆಗೆ ತುಂಬ ನೀರು ಹಾಕಿ ನಾಲ್ಕರಿಂದ ಐದು ಗಂಟೆಗಳ ಕಾಲ ಬಿಡಿ. ಬಳಿಕ ಮೇಲಿನ ನೀರು ಚೆಲ್ಲಿದರೆ ಅಡಿಯಲ್ಲಿ ಇರುವ ಹಿಟ್ಟನ್ನು ಅಗಲವಾದ ಹರಿವಾಣಗಳಲ್ಲಿ ಇಟ್ಟು ಬಿಸಿಲಿಗೆ ಒಣಗಿಸಿ. ಎರಡರಿಂದ ಮೂರು ಬಿಸಿಲಿಗೆ ಒಣಗಿಸಿದರೆ ತಾಜಾ, ಪರಿಶುದ್ಧವಾದ ಶ್ವೇತವರ್ಣದ ಕೂವೆ ಹಿಟ್ಟು ತಯಾರಾಗುತ್ತದೆ. ಇದನ್ನು ಸುಮಾರು ಹತ್ತು ವರ್ಷಗಳ ಕಾಲ ಸಂರಕ್ಷಿಸಿ ಇಟ್ಟುಕೊಳ್ಳಬಹುದು.
ಪೌಷ್ಟಿಕ ಆಹಾರ:
ಇದು ಪೌಷ್ಟಿಕ ಆಹಾರವಾಗಿರುವುದರ ಜೊತೆಗೆ ಅನೇಕ ಔಷಧೀಯ ಮೌಲ್ಯಗಳನ್ನು ಒಳಗೊಂಡಿದೆ. ವಿಟಮಿನ್ ಬಿ 12 ಇದರಲ್ಲಿದೆ. ಗರ್ಭಿಣಿಯರಿಗೆ ಅಗತ್ಯವಾದ ಫೊಲೇಟ್ಸ್ ಇರುವುದರಿಂದ ಗರ್ಭಿಣಿಯರು ಆಗಾಗ ಆಹಾರದಲ್ಲಿ ಬಳಸಿದರೆ ಒಳ್ಳೆಯದು. ನಾರು ರಹಿತ, ಕೊಬ್ಬು ರಹಿತ, ಪಿಷ್ಟ ತುಂಬಿದ ಅರಾರೂಟ್ ಹಿಟ್ಟು ಶಿಶುಗಳಿಗೆ, ಗರ್ಭಿಣಿಯರಿಗೆ ಅಶಕ್ತರಿಗೆ ಜೀರ್ಣಕ್ಕೆ ಸುಲಭ. ಕೂವೆ ಹಿಟ್ಟು ಅಶಕ್ತರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ.
ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಇಳಿಸಲು ಬಯಸುವವರಿಗೆ ಇದು ಸಹಕಾರಿ. ಸ್ಥೂಲಕಾಯದವರು ಸಾಸ್ ಮತ್ತು ಸೂಪ್‍ಗಳಲ್ಲಿ ಅರಾರೂಟ್ ಬಳಸಿದರೆ ತೂಕ ಇಳಿಸಲು ಪರಿಣಾಮಕಾರಿ. ಇದರಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು ಹೃದಯದ ಆರೋಗ್ಯ ಕಾಪಾಡಲು ತುಂಬ ಒಳ್ಳೆಯದು. ಇದು ರಕ್ತದೊತ್ತಡ ಮತ್ತು ಹೃದಯದ ಬಡಿತ ನಿಯಂತ್ರಿಸಲು ಸಹಕಾರಿ. ಚರ್ಮದ ಆರೋಗ್ಯ ರಕ್ಷಣೆಗೂ ಸಹಕಾರಿ. ಅರಾರೂಟ್ ಹಿಟ್ಟು ಬಳಸಿ ತಯಾರಿಸಿದ ಫೇಸ್ ಪ್ಯಾಕ್ ಬಳಸಿ ಮುಖ ಸೌಂದರ್ಯ ಕಾಪಾಡುವುದರ ಜೊತೆಗೆ ಬ್ಯೂಟಿಪಾರ್ಲರ್ ಹಣವೂ ಉಳಿಯುತ್ತದೆ.
ಶ್ರೇಷ್ಠ ಶಿಶುವಿನ ಆಹಾರ:
ಶಿಶುವಿಗೆ ಆರು ತಿಂಗಳು ಕಳೆದ ಕೂಡಲೇ ಮಗುವಿಗೆ ಪೂರಕ ಆಹಾರ ಏನು ಕೊಡುವುದು ಎಂಬ ಚಿಂತೆ ತಾಯಂದಿರಿಗೆ. ಮನೆಯಲ್ಲಿ ಅರಾರೂಟ್ ಇದ್ದರೆ ಅದರಷ್ಟು ಉತ್ತಮ ಶಿಶು ಆಹಾರ ಇನ್ನೊಂದಿಲ್ಲ. ಒಂದೆರಡು ಚಮಚ ಆರಾರೂಟ್ ಹುಡಿಯನ್ನು ಒಂದು ಲೋಟ ತಣ್ಣೀರಿಗೆ ಹಾಕಿ ಕಲಸಿ. ದೋಸೆ ಹಿಟ್ಟಿನಂತಿರುವ ಈ ಹಿಟ್ಟಿಗೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಕುದಿಯಲು ಇಟ್ಟು ಚಮಚದಲ್ಲಿ ಕಲಕುತ್ತಿರಬೇಕು.
ಎರಡು ನಿಮಿಷದಲ್ಲಿ ಮಂದವಾಗುತ್ತದೆ. ತಣಿದ ಬಳಿಕ ಕುದಿಸಿ ಆರಿಸಿದ ಹಾಲನ್ನು ಸೇರಿಸಿದರೆ ಮಗುವಿಗೆ ಪೌಷ್ಟಿಕ ಮಣ್ಣಿ ತಯಾರು. ಇಂತಹ ಮಣ್ಣಿಯನ್ನು ಮಕ್ಕಳಿಗೆ ಕೊಡುತ್ತ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಮಕ್ಕಳು ಪುಷ್ಟಿಯಾಗಿ ಬೆಳೆಯುತ್ತವೆ. ಇದು ಭೇದಿಗೆ ಉತ್ತಮ ಔಷಧಿ. ಮಕ್ಕಳು ಅಥವಾ ವಯಸ್ಕರಿಗು ಕೂಡ ಅಜೀರ್ಣ ಅಥವಾ ಸೋಂಕಿನಿಂದುಂಟಾದ ಭೇದಿಗೆ ಇದು ರಾಮ ಬಾಣ. ಆರಾರೂಟ್ ಗಂಜಿಯನ್ನು ಸೇವಿಸಿದರೆ ತಕ್ಷಣ ಭೇದಿ ನಿಲ್ಲುತ್ತದೆ.
ಕೂವೆ ದೋಸೆ:
ನೀರು ದೋಸೆಗೆ ರುಬ್ಬುವಾಗ ಒಂದೆರಡು ಕೂವೆ ಗೆಡ್ಡೆಗಳನ್ನು ತುರಿದು ಹಾಕಬಹುದು. ಇದರಿಂದ ದೋಸೆಗೆ ವಿಶೇಷ ರುಚಿ ಮತ್ತು ಹೆಚ್ಚಿನ ಪೌಷ್ಟಿಕಾಂಶಗಳು ದೊರೆಯುತ್ತವೆ. ಗೆಣಸಿಂತೆ ಸ್ವಲ್ಪ ಉಪ್ಪು ಸೇರಿಸಿ ಇಡೀ ಗೆಡ್ಡೆಯನ್ನು ಬೇಯಿಸಿ ಅಥವಾ ಒಲೆಯ ಕೆಂಡದಲ್ಲಿ ಸುಟ್ಟು ಕೂಡ ತಿನ್ನಬಹುದು. ಆಹಾರದಲ್ಲಿ ಕೂವೆಯನ್ನು ಬಳಸುವುದರಿಂದ ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಅರಾರೂಟ್ ಐಸ್ ಕ್ರೀಮ್:
ಮಾರುಕಟ್ಟೆಯಲ್ಲಿ ದೊರೆಯುವ ಐಸ್‍ಕ್ರೀಮ್ ಡಾಂಬರಿನಿಂದ ತಯಾರಿಸಲಾದ ಕೃತಕ ವೆನಿಲಾ ಹನಿಗಳನ್ನು ಹಾಕಿ ಮಾಡಿರುವಂತಹುದು ಎಂಬ ಆರೋಪಗಳಿವೆ. ಅದರ ಬದಲು ಮನೆಯಲ್ಲೇ ಅರಾರೂಟ್ ಬಳಸಿ ಪರಿಶುದ್ಧವಾದ ಐಸ್‍ಕ್ರೀಮ್ ತಯಾರಿಸಿ ಮಕ್ಕಳಿಗೆ ಕೊಡಬಹುದು. ಒಂದು ಲೀಟರ್ ಹಾಲಿಗೆ ಎರಡು ಚಮಚ ಅರಾರೂಟ್ ಪುಡಿ, 25 ಚಮಚ ಸಕ್ಕರೆ ಹಾಕಿ ಕುದಿಸಿ. ಒಂದು ಚಿಟಿಕೆ ವೆನಿಲಾ ಪುಡಿ ಬೆರೆಸಿ. ಹಾಲು ತಣಿದ ಬಳಿಕ ಬಟ್ಟಲುಗಲಿಗೆ ಹಾಕಿ ನಾಲ್ಕು ಗಂಟೆಗಳ ಕಾಲ ಫ್ರೀಜರ್‍ನಲ್ಲಿಡಿ. ಆರೋಗ್ಯಕರವಾದ ಐಸ್‍ಕ್ರೀಮ್ ತಯಾರಾಗುತ್ತದೆ.
ಇದೇ ರೀತಿ ಆರಾರೂಟು ಪುಡಿಗೆ ಸಕ್ಕರೆ, ಉಪ್ಪು, ತುಪ್ಪ ಸೇರಿಸಿ ಓವನ್‍ನಲ್ಲಿ ಬೇಯಿಸಿ ಉತ್ತಮವಾದ ಬಿಸ್ಕೆಟ್ ಕೂಡ ತಯಾರಿಸಬಹುದು. ತೆಂಗಿನ ಹಾಲಿಗೆ ಆರಾರೂಟ್ ಪುಡಿ, ಏಲಕ್ಕಿ ಪುಡಿ, ಬೆಲ್ಲ ಸೇರಿಸಿ ಕಾಯಿಸಿ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿದರೆ ಆರಾರೂಟ್ ಹಲ್ವ. ಇದು ಮಕ್ಕಳಿಗೂ, ವೃದ್ಧರಿಗೂ ಎಲ್ಲರಿಗೂ ಆರೋಗ್ಯಕ್ಕೆ ಒಳ್ಳೆಯದು.
ಮಾರುಕಟ್ಟೆಯಲ್ಲಿ ದೊರೆಯುವ ಅರಾರೂಟ್ ಪುಡಿ ದುಬಾರಿಯಾಗಿದ್ದು, ಕಲಬೆರಕೆ ಆಗಿಲ್ಲವೆಂಬ ಖಾತ್ರಿ ಇರುವುದಿಲ್ಲ. ಹೀಗಾಗಿ ಸ್ಥಳಾವಕಾಶ ಇರುವವರು ಅರಾರೂಟ್ ಗಿಡಗಳನ್ನು ನೆಟ್ಟು ಪರಿಶುದ್ಧವಾದ ಅರಾರೂಟ್ ಹಿಟ್ಟು ತಯಾರಿಸಿ ಬಳಸಬಹುದು.