ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ಇರಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ದಾಳಿಕೋರನ ಪತ್ತೆಗೆ 7 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದೆ.
ಗುರುವಾರ ಮುಂಜಾನೆ ಮನೆಗೆ ನುಗ್ಗಿದ ದುಷ್ಕರ್ಮಿ ಸೈಫ್ ಅಲಿ ಖಾನ್ ಗೆ ಚಾಕು ಇರಿದಿದ್ದು, 6 ಕಡೆ ಗಾಯಗಳಾಗಿವೆ. ಕೂಡಲೇ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದಾಳಿ ಬೆನ್ನಲ್ಲೇ ಸೈಫ್ ಅಲಿ ಖಾನ್ ಮನೆಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಯ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
ದಾಳಿಗೂ ಮುನ್ನ 2 ಗಂಟೆಯ ಅವಧಿಯ ಸಿಸಿಟಿವಿ ಪರಿಶೀಲಿಸಲಾಗಿದ್ದು, ಯಾವುದೇ ವ್ಯಕ್ತಿ ಅಕ್ರಮವಾಗಿ ಮನೆ ಪ್ರವೇಶಿಸಿಲ್ಲ. ಇದರಿಂದ ದಾಳಿ ಮಾಡಿದ ವ್ಯಕ್ತಿ ಮನೆಯವರಿಗೆ ಪರಿಚಿತನೇ ಆಗಿದ್ದು, ಕೆಲಸ ಮಾಡುವವರಲ್ಲಿ ಒಬ್ಬರಾಗಿರಬಹುದು ಎಂದು ಶಂಕಿಸಲಾಗಿದೆ.
ದುಷ್ಕರ್ಮಿ ಮೊದಲೇ ಮನೆಯೊಳಗೆ ಪ್ರವೇಶಿಸಿ ಅಡಗಿಕೊಂಡಿದ್ದು, ಸಮಯ ನೋಡಿ ದಾಳಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ತನಿಖೆಗೆ 7 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಆಸ್ಪತ್ರೆಯಲ್ಲಿ ಇರುವುದರಿಂದ ಅವರ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಅವರು ಚೇತರಿಸಿಕೊಂಡ ನಂತರ ನೀಡುವ ಹೇಳಿಕೆ ಮೇಲೆ ತನಿಖೆ ಮತ್ತಷ್ಟು ಚುರುಕಾಗಲಿದ್ದು, ಆರೋಪಿ ಪತ್ತೆ ಸುಲಭವಾಗಲಿದೆ ಎಂದು ಹೇಳಲಾಗಿದೆ.