ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್-1 ಸಿನಿಮಾ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಗಳಿಕೆಗೆ 100 ಕೋಟಿ ರೂ. ದಾಟಿದೆ. ಈ ಮೂಲಕ ಕಾಂತಾರ 2025ನೇ ಸಾಲಿನ ಅತೀ ದೊಡ್ಡ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ.
ಕಾಂತಾರ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 17 ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಇದೇ ಮೊದಲ ಬಾರಿ ಮೆಕ್ಸಿಕನ್ ಸೇರಿದಂತೆ ವಿದೇಶೀ ಭಾಷೆಗಳಲ್ಲೂ ಡಬ್ ಆಗಿ ಬಿಡುಗಡೆ ಆಗಿದೆ.
ಕಾಂತಾರ ಚಿತ್ರದ ಮೊದಲ ದಿನ ಭಾರತದಲ್ಲಿ 60 ಕೋಟಿ ರೂ. ಗಳಿಸಿದರೆ, ವಿದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಗಳಿಕೆ 100 ಕೋಟಿ ರೂ. ದಾಟಿದೆ. 2025ನೇ ಸಾಲಿನಲ್ಲಿ ರಜನಿಕಾಂತ್ ಅವರ ಕೂಲಿ ಮತ್ತು ಪವನ್ ಕಲ್ಯಾಣ್ ಅವರ ದೆ ಕಾಲ್ ಹಿಮ್ ಓಜಿ ನಂತರ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಿಂದಿಯಲ್ಲಿ ಮೊದಲ ದಿನವೇ 21 ಕೋಟಿ ರೂ. ಗಳಿಸಿದ್ದು, ಇದು ಯಾವುದೇ ಸ್ಟಾರ್ ನಟನ ಚಿತ್ರಕ್ಕೆ ದೊರೆತ ಆರಂಭಕ್ಕೆ ಹೋಲಿಕೆ ಮಾಡಲಾಗಿದೆ. ಅಲ್ಲದೇ ಯಶ್ ನಟಿಸಿದ್ದ ಕೆಜಿಎಫ್ -2 ಮೊದಲ ದಿನ 54 ಕೋಟಿ ರೂ. ಗಳಿಸಿದ್ದು, ಈ ದಾಖಲೆಯನ್ನು ಕಾಂತಾರ ಮುರಿದಿದೆ. ಕೆಜಿಎಫ್-2 ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ 120 ಕೋಟಿ ರೂ. ಗಳಿಸಿತ್ತು. ಅಲ್ಲದೇ ಸತತ 5 ದಿನ 100 ಕೋಟಿಗೂ ಅಧಿಕ ಮೊತ್ತ ಗಳಿಸಿದ ದಾಖಲೆ ಹೊಂದಿದೆ.
ಕಾಂತಾರ ಮೊದಲ ಚಿತ್ರ 6 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದರೆ, ಕಾಂತಾರ ಚಾಪ್ಟರ್-1 ಚಿತ್ರವನ್ನು 125 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


