ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಬೆನ್ನು ನೋವಿನ ಕಾರಣ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್ ನಂತರ ಮಾಮೂಲು ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಮನೆಗೆ ಮರಳಿದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು.
ದರ್ಶನ್ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆ ಬಗ್ಗೆ ಲೋಪಗಳು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ ಹಾಗೂ ಸಹಚರರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿತ್ತು.
ಪೊಲೀಸ್ ಇಲಾಖೆಯ ಮನವಿಗೆ ರಾಜ್ಯ ಗೃಹ ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇನ್ನೆರಡು ದಿನದಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಲು ಚಾರ್ಜ್ ಶೀಟ್, ಕಡತ, ಸಾಕ್ಷ್ಯಗಳ ಹೇಳಿಕೆಗಳನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಲಾಗುತ್ತಿದ್ದು, ನಾಳೆ ಅಥವಾ ನಾಡಿದ್ದು ಮೇಲ್ಮನವಿ ಜೊತೆ ದಾಖಲೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ನಲ್ಲಿ ಸರ್ಕಾರದ ಪರ ವಾದ ಮಂಡಿಸಲು ಅನಿಲ್ ಸಿ. ನಿಶಾನಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ಸೀನಿಯರ್ ಲಾಯರ್ ಸಿದ್ಧಾರ್ಥ ಲೂತ್ರ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.