ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದರೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಣದಿಂದ ಹಿಂದೆ ಸರಿಯುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ ನನಗೆ ಕರೆ ಮಾಡಿರುವುದು ನಿಜ. ನಾಮಪತ್ರ ವಾಪಸ್ ಪಡೆದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಅವರು ಮನವಿ ಮಾಡಿದರು. ಆದರೆ ನಾನು ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಸ್ಪರ್ಧೆಯಲ್ಲಿ ಇರುವುದಾಗಿ ತಿಳಿಸಿದ್ದಾಗಿ ಹೇಳಿದರು.
ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಕಾರಣಗಳನ್ನು ನಾನು ಅವರಿಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಒಂದೇ ಕುಟುಂಬದ ಹಿಡಿತದಲ್ಲಿದೆ. ಪಕ್ಷದ ಎಲ್ಲಾ ಪ್ರಮುಖ ಹುದ್ದೆಗಳು ಅವರ ಹಿಡಿತದಲ್ಲಿವೆ. ಕುಟುಂಬ ರಾಜಕಾರಣ ತಪ್ಪಿಸಲು ನಾನು ಬಿಜೆಪಿ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸುತ್ತಿರುವುದಾಗಿ ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಯಲ್ಲೂ ಬೆಳೆಯುತ್ತಿದೆ. ಕುಟುಂಬ ರಾಜಕಾರಣದಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ಅಲ್ಲದೇ ಹಿಂದುತ್ವದ ವಿರುದ್ಧ ಮಾತನಾಡುವವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಅವರು ನುಡಿದರು.