ಸಮುದ್ರ ಮಟ್ಟದಲ್ಲಿ ಏರುತ್ತಿರುವುದರಿಂದ ಶೀಘ‍್ರದಲ್ಲೇ ಬ್ಯಾಂಕಾಕ್ ಮುಳುಗಡೆ ಆಗಲಿದ್ದು, ಪರ್ಯಾಯ ಥಾಯ್ಲೆಂಡ್ ಪರ್ಯಾಯ ರಾಜಧಾನಿಯತ್ತ ಗಮನಹರಿಸಬೇಕಾಗಿದೆ ಎಂದು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.
ಹವಾಮಾನ ವೈಪರಿತ್ಯದಿಂದ ಈ ಶತಮಾನದ ಅಂತ್ಯದ ವೇಳೆಗೆ ಸಮುದ್ರ ಮಟ್ಟದಲ್ಲಿರುವ ಬ್ಯಾಂಕಾಕ್ ಮುಳುಗಡೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಸ್ಥಳಾಂತರ ಮಾಡಲು ಚಿಂತನೆ ನಡೆದಿದೆ ಎಂದು ಥಾಯ್ಲೆಂಡ್ ನ ಹವಾಮಾನ ಬದಲಾವಣೆ ಅಧಿಕಾರಿ ತಿಳಿಸಿದ್ದಾರೆ.
ಬ್ಯಾಂಕಾಕ್ ಈಗಾಗಲೇ ಭಾರೀ ಮಳೆಯಿಂದ ಪದೇಪದೆ ಉದ್ಭವಾಗುತ್ತಿರುವ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ಪ್ರಸ್ತುತ ಜಗತ್ತು ಹೆಚ್ಚು ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದು, ಬ್ಯಾಂಕಾಕ್ ಕೂಡ ಇದರಿಂದ ಹೊರತಾಗಿಲ್ಲ ಎಂದು ಸರ್ಕಾರದ ಹವಾಮಾನ ಬದಲಾವಣೆ ಇಲಾಖೆಯ ಪ್ರಧಾನ ನಿರ್ದೇಶಕ ಪವಿಚ್ ಕೆಸವವಾಂಗ್ ವಿವರಿಸಿದ್ದಾರೆ.
ಬ್ಯಾಂಕಾಕ್ ನಲ್ಲಿ ಈಗಾಗಲೇ ಸಾಮಾನ್ಯಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿದೆ. ಹೊಸ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಲೇಬೇಕಾಗಿದೆ. ಪ್ರಸ್ತುತ ಬ್ಯಾಂಕಾಕ್ ಈಗಾಗಲೇ ಬಹುತೇಕ ಮುಳುಗಡೆ ಆಗಿದೆ. ನಾವು ಶೀಘ್ರದಲ್ಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಹಾಲೆಂಡ್ ಮಾದರಿಯಲ್ಲಿ ನಾವು ಕೊಳವೆ ಕೊರೆಸುವುದು ಸೇರಿದಂತೆ ಹಲವು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಆದರೆ ಅಂತಿಮವಾಗಿ ನಾವು ಬೇರೊಂದು ರಾಜಧಾನಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರ ಆಗುವುದು ಉತ್ತಮವಾಗಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.