ಬ್ಯಾಡಗಿ ಮೆಣಸಿಕಾಯಿ ದರ ಕುಸಿತದಿಂದ ಆಕ್ರೋಶಗೊಂಡ ರೈತರು ಹಾವೇರಿ ಎಪಿಎಂಸಿ ಕಚೇರಿ ಮೇಲೆ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ ಹಾವೇರಿ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ದಿಢೀರನೆ ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ ಕಂಡಿತು. ಇದರಿಂದ ಕೆರಳಿದ ಸ್ಥಳೀಯರ ರೈತರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದರು.
ಸೋಮವಾರ ಬೆಳಿಗ್ಗೆ ಆಂಧ್ರಪ್ರದೇಶದಿಂದ ಆಗಮಿಸಿದ ರೈತರು ಮೆಣಸಿನಕಾಯಿ ಮಾರಾಟಕ್ಕೆ ಮುಂದಾಗಿದ್ದರಿಂದ ದರ ಕುಸಿತಗೊಂಡಿತು ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಬಸವರಾಜ್ ನೀಲಪ್ಪ ಶಿವಣ್ಣನವರ್ ವಿವರಣೆ ನೀಡಿದ್ದಾರೆ.
ಕಳೆದ ವಾರ ಬ್ಯಾಡಗಿ ಮೆಣಸಿನಕಾಯಿ ದರ 100 ಕೆಜಿಗೆ 20,000 ರೂ.ನಿಂದ 25 ಸಾವಿರ ರೂ. ಇತ್ತು. ಆದರೆ ಇಂದು 10 ಸಾವಿರದಿಂದ 15 ಸಾವಿರ ರೂ.ಗೆ ಕುಸಿತ ಕಂಡಿದೆ. ಆಂಧ್ರ ಪ್ರದೇಶ ರೈತರು ಈ ಮಾರುಕಟ್ಟೆ ಪ್ರವೇಶಿಸಿದ್ದರಿಂದ ದರ ಕುಸಿತ ಕಂಡಿದೆ ಎಂದು ಅವರು ಹೇಳಿದರು.