ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಾಗಮಂಗಲ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿಲ್ಲದ ವಿಡಿಯೋ, ಫೋಟೋ ಪೋಸ್ಟ್ ಮಾಡಿ ದೊಂಬಿ, ಗಲಭೆಗೆ ಪ್ರಚೋದನೆ ನೀಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪಡಿ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
ನಾಗಮಂಗಲ ಪ್ರಕರಣದಲ್ಲಿ ಗಣೇಶ ಮೂರ್ತಿಯನ್ನು ಕಂಬಿ ಹಿಂದೆ ಹಾಕಿದ್ದಾರೆ ಎಂದು ಗಣೇಶನ ಮೂರ್ತಿಯ ಫೋಟೊವನ್ನು ಶೋಭಾ ಕರಂದ್ಲಾಜೆ ಮತ್ತು ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 192ರ ಅಡಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ (ಸುವೋ ಮೋಟೋ) ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತಮ್ಮ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಸಿಎಂ ಆದ ಮೇಲೆ ಸಿದ್ದರಾಮಯ್ಯ ಹಿಟ್ಲರ್ ಆಗಿದ್ದಾರೆ. ಅವರ ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡಿ ಹೋಗಲ್ಲ ಎಂದು ಆರೋಪಿಸಿದರು.
ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನ್ನಲ್ಲಿ ಕರೆದುಕೊಂಡು ಹೋದರು. ಇದು ದೇಶದಲ್ಲೇ ಮೊದಲು. ಗಣಪತಿಗೇ ವಿಘ್ನ ಮಾಡಿದರು. ಚಪ್ಪಲಿ ಬಿಸಾಡಿದರು, ಕಲ್ಲು ಎಸೆದರು, 25 ಅಂಗಡಿ ಸುಟ್ಟು ಹಾಕಿದರು. ಅವರಿಗೆ ಎಲ್ಲಿಂದ ಶಕ್ತಿ ಬಂತು? ಕೇರಳದವರು ಬಂದಿದ್ದಾರೆ ಎಂದಬುದು ಗೊತ್ತಾಗಿದೆ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು.