ತಪ್ಪು ದಾರಿಗೆ ಕರೆದೊಯ್ಯುವ ಧಾರ್ಮಿಕ ಮುಖಂಡರನ್ನು ಹಿಂಬಾಲಿಸದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅನುಸರಿಸಿ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ ನೀಡಿದ್ದಾರೆ.
ಜುಲೈ 2ರಂದು ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 121 ಮಂದಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಸಲಹೆ ನೀಡಿರುವ ಮಾಯಾವತಿ, ದಲಿತರು ಬಡತನವನ್ನು ಮೆಟ್ಟಿ ನಿಲ್ಲಲು ಅಂಬೇಡ್ಕರ್ ಅವರನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸಬೇಕೆ ಹೊರತು ಧಾರ್ಮಿಕ ಮುಖಂಡರನ್ನು ಅಲ್ಲ ಎಂದಿದ್ದಾರೆ.
ಬಡವರು, ದಲಿತರು ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಭೋಲೆ ಬಾಬಾ ಮಾದರಿಯ ಧಾರ್ಮಿಕ ಮುಖಂಡರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ. ಅವರು ನಿಮ್ಮ ಬಡತನದ ಲಾಭ ಪಡೆಯುತ್ತಾರೆ ಹೊರತು ಬಡತತನದಿಂದ ಮೇಲೆತ್ತುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಸಮಾಜದಲ್ಲಿ ಬದಲಾವಣೆ ಅಥವಾ ಸುಧಾರಣೆ ತರಬೇಕಾದರೆ ನಾವು ಅಧಿಕಾರದಲ್ಲಿ ಇರಬೇಕು. ಹಾಗಾಗಿ ಬಿಎಸ್ ಪಿ ಪಕ್ಷವನ್ನು ಸೇರಿಕೊಂಡು ಅಧಿಕಾರ ಹಿಡಿದರೆ ಹತ್ರಾಸ್ ಅಂತಹ ಘಟನೆಗಳು ನಡೆಯುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಹತ್ರಾಸ್ ಘಟನೆಯಲ್ಲಿ 121 ಜನ ಮುಗ್ಧರನ್ನು ಬಲಿ ಪಡೆದ ಭೋಲೆ ಬಾಬಾ ಸೇರಿದಂತೆ ಎಲ್ಲಾ ತಪ್ಪಿತಸ್ಥರನ್ನು ಗುರುತಿಸಿ ಕ್ರಮಕೈಗೊಳ್ಳಬೇಕು ಅವರಿಗೆ ಶಿಕ್ಷೆ ಆಗಬೇಕು. ಸರ್ಕಾರ ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಮಾಯಾವತಿ ಸರ್ಕಾರಕ್ಕೆ ಸಲಹೆ ನೀಡಿದರು.