ಟಿ-20 ವಿಶ್ವಕಪ್ನಲ್ಲಿ ವಿಶ್ಲೇಷಕರನಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಮೇಕಪ್ ಮ್ಯಾನ್ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವೆಸ್ಟ್ ಇಂಡೀಸ್ ನಲ್ಲಿ ಸಂಭವಿಸಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಾಗಿನಾ ಗ್ರಾಮದ ನಿವಾಸಿಯಾಗಿದ್ದ ಮೇಕಪ್ ಮ್ಯಾನ್ ಕಲಾವಿದ ಫಯಾಜ್ ಅನ್ಸಾರಿ ಮೃತಪಟ್ಟಿದ್ದಾರೆ.
22 ವರ್ಷಗಳ ಹಿಂದೆ ಮುಂಬೈಗೆ ವಲಸೆ ಬಂದಿದ್ದ ಫಯಾಜ್ ಅನ್ಸಾರಿ ಕೆಲವು ವರ್ಷಗಳಲ್ಲೇ ತಮ್ಮದೇ ಸ್ವಂತ ಸಲೂನ್ ತೆರೆದಿದ್ದರು. ಈ ಸಲೂನ್ ಗೆ ಆಗಾಗ ಭೇಟಿ ನೀಡುತ್ತಿದ್ದ ಇರ್ಫಾನ್ ಪಠಾಣ್ ನಂತರ ತಮ್ಮ ವೈಯಕ್ತಿಕ ಮೇಕಪ್ ಮ್ಯಾನ್ ಆಗಿ ನೇಮಿಸಿಕೊಂಡಿದ್ದರು.
ವೆಸ್ಟ್ ಇಂಡೀಸ್ ನಲ್ಲಿ ಪ್ರಸ್ತುತ ಟಿ-20 ವಿಶ್ವಕಪ್ ನ ಸೂಪರ್-8 ಪಂದ್ಯಗಳು ನಡೆಯುತ್ತಿದ್ದು, ಇರ್ಫಾನ್ ಪಠಾಣ್ ಜೊತೆ ವೆಸ್ಟ್ ಇಂಡೀಸ್ ನಲ್ಲಿ ನೆಲೆಸಿದ್ದ ಫಯಾಜ್ ಅನ್ಸಾರಿ ತಾವು ಉಳಿದುಕೊಂಡಿದ್ದ ಹೋಟೆಲ್ ನ ಶುಕ್ರವಾರ ಈಜುಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಫಯಾಜ್ ಎರಡು ತಿಂಗಳ ಹಿಂದೆಯಷ್ಟೇ ನಾಗಿನಾ ಗ್ರಾಮದಲ್ಲಿ ಮದುವೆ ಆಗಿದ್ದರು ಎಂದು ಸೋದರ ತಿಳಿಸಿದ್ದಾನೆ. ಸ್ವತಃ ಇರ್ಫಾನ್ ಪಠಾಣ್ ಮುಂದೆ ನಿಂತು ಎಲ್ಲಾ ಕ್ರಮಗಳನ್ನು ಕೈಗೊಂಡು ಶವವನ್ನು ತವರಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.