ಮಾಜಿ ಸಂಸದ ಜಯಂತ್ ಸಿನ್ಹಾ ಮತದಾನ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸೋಮವಾರ ನಡೆದ 5ನೇ ಹಂತದ ಮತದಾನದ ವೇಳೆ ಜಾರ್ಖಂಡ್ ನಲ್ಲಿ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು ಎಂದು ತಿಳಿದಿದ್ದು ಹಾಗೂ ಜನಪ್ರತಿನಿಧಿಯಾಗಿ ತೋರಿದ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಜಾರ್ಖಂಡ್ ನ ಹಜಾರಿಭಾಗ್ ನಲ್ಲಿ ಮನೀಶ್ ಜೈಸ್ವಾಲ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಜಯಂತ್ ಸಿನ್ಹಾ, ಪ್ರಚಾರ ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಗಳಿಂದ ದೂರ ಉಳಿದಿದ್ದರು.
“ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮ್ಮ ಮತ ಚಲಾಯಿಸುವ ಅಗತ್ಯವೂ ನಿಮಗೆ ಇರಲಿಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್ನಲ್ಲಿ ತಿಳಿಸಿದ್ದಾರೆ.