ಭಾರತೀಯ ದಂಡ ಸಂಹಿತೆ (ಐಪಿಸಿ) ಸೇರಿದಂತೆ ಬ್ರಿಟಿಷರು ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿದ್ದ ಕ್ರಿಮಿನಲ್ ಕಾನೂನುಗಳು ತೆಗೆದು ಹಾಕಿ ಇದೀಗ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿದೆ. ಈ ಮೂಲಕ ಸರ್ವರಿಗೂ ನ್ಯಾಯ, ಶೀಘ್ರ ನ್ಯಾಯ ತತ್ವದ ಅಡಿಯ ಹೊಸ ಕಾನೂನಿನ ಯುಗಾರಂಭವಾಗಲಿದೆ.
ಇದುವರೆಗೆ ಜಾರಿಯಲ್ಲಿದ್ದ ಇಂಡಿಯನ್ ಪಿನಾಲ್ ಕೋಡ್, ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲು ಭಾರತೀಯ ದಂಡ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ನೂತನ ಕ್ರಿಮಿನಲ್ ಕಾನೂನುಗಳ ಪ್ರಕಾರ 60 ದಿನಗಳ ಮೊದಲ ಹಂತದ ವಿಚಾರಣೆ ನಂತರ 45 ದಿನಗಳಲ್ಲಿ ಪ್ರಕರಣದ ತೀರ್ಪು ಹೊರಬೀಳಬೇಕು.
ಹೊಸ ನಿಯಮದ ಪ್ರಕಾರ ಯಾವುದೇ ವ್ಯಕ್ತಿ ಆನ್ ಲೈನ್ ಅಥವಾ ಡಿಜಿಟಲ್ ಮಾಧ್ಯಮ ಮೂಲಕ ಯಾವುದೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಜೀರೋ ಎಫ್ ಐಆರ್ ದಾಖಲಿಸಬಹುದಾಗಿದೆ.
ಅಪರಾಧ ನಡೆದ ಜಾಗವನ್ನು ವೀಡಿಯೋ ಚಿತ್ರೀಕರಣ ಮಾಡಬೇಕು. ಮತ್ತು ಕಾನೂನು ಕ್ರಮ ಜರುಗಿಸಲು ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಕೂಡಲೇ ಸಮನ್ಸ್ ಜಾರಿಗೊಳಿಸಬೇಕು.
ನೂತನ ಕ್ರಿಮಿನಲ್ ಕಾನೂನುಗಳು ಶೀಘ್ರ ನ್ಯಾಯ ಹಾಗೂ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಕಾನೂನು ಆಗಿದೆ. ಶೀಘ್ರ ನ್ಯಾಯ ದೊರಕಿಸಲು ಅಧಿಕಾರಿಗಳಿಗೆ ಸೂಕ್ತ ತರಬೇತಿ ಹಾಗೂ ಫೋರೆನ್ಸಿಕ್ ಲ್ಯಾಬ್ ಗಳ ಸಹಾಯ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.